

ಶಿವಮೊಗ್ಗ: ಕೇವಲ ಎರಡೇ ನಿಮಿಷದಲ್ಲಿ ಬರೋಬ್ಬರಿ 10 ಇಡ್ಲಿ ಮತ್ತು ಸಾಂಬರ್ ಸ್ವಾಹ ಮಾಡಿದ ಮಹಿಳೆ. ನಾಮುಂದು, ತಾಮುಂದು ಎಂಬಂತೆ ಒಂದೊಂದಾಗಿ ಬಾಳೆಹಣ್ಣು ಗುಳಂ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ. ಇಡ್ಲಿ ಖಾಲಿ ಆಯ್ತು ಬೇಗ ತನ್ನಿ, ಸಾಂಬರ್ ಹಾಕ್ರಿ, ಅಯ್ಯೋ ಸಾಕಾಯ್ತು ನೀರು ಕೊಡ್ರಾಪ್ಪ…
ಇದು ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವದ ಆಹಾರ ದಸರಾ ಅಂಗವಾಗಿ ಬುಧವಾರ ಶಿವಪ್ಪ ನಾಯಕ ವೃತ್ತದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಬಾಳೆಹಣ್ಣು ಮತ್ತು ಸಾರ್ವಜನಿಕರಿಗೆ ಇಡ್ಲಿ ತಿನ್ನುವ ಸ್ಪರ್ಧೆಯ ಕೌತುಕದ ಕ್ಷಣಗಳು. ಇಡ್ಲಿ, ಬಾಳೆಹಣ್ಣು ತಿನ್ನುವುದನ್ನು ಕಂಡ ಸಾರ್ವಜನಿಕರು ಇವರೇನು ಬಕಾಸುರರೇ ಎಂದು ಬಾಯಿಮೇಲೆ ಬೆರಳಿಟ್ಟು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಆಹಾರ ದಸರಾದಲ್ಲಿ ಇಡ್ಲಿ ಮತ್ತು ಸಾಂಬಾರ್ ತಿನ್ನುವ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಅಣ್ಣಾನಗರ 5ನೇ ಕ್ರಾಸ್‌ನ ಶಿವಮ್ಮ 10 ಇಡ್ಲಿ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರು. 8 ಇಡ್ಲಿ ತಿಂದ ಧನಲಕ್ಷ್ಮೀ ವೆಂಕಟೇಶ್ ದ್ವಿತೀಯ, 6.5 ಇಡ್ಲಿ ಸ್ವಾಹ ಮಾಡಿದ ರಾಜಲಕ್ಷ್ಮೀ ತೃತೀಯ ಸ್ಥಾನ ಪಡೆದರು. ಸತತ ನಾಲ್ಕನೇ ಬಾರಿಗೆ ಮೊದಲ ಸ್ಥಾನ ಪಡೆದ ಹೆಗ್ಗಳಿಗೆ ಶಿವಮ್ಮ ಅವರದ್ದಾಗಿದೆ. ಕಳೆದ ವರ್ಷ 8 ಕೊಟ್ಟೆ ಕಡುಬು ತಿಂದು ಪ್ರಥಮ ಸ್ಥಾನ ಪಡೆದಿದ್ದರು ಎಂಬುದು ವಿಶೇಷ.
ಪುರುಷರ ವಿಭಾಗದಲ್ಲಿ ಮಹಾನಗರ ಪಾಲಿಕೆ ಪೌರಕಾರ್ಮಿಕ ಪ್ರವೀಣ್‌ಕುಮಾರ್ 11.5 ಇಡ್ಲಿ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರೆ, 11 ಇಡ್ಲಿ ತಿಂದ ರವಿಕಿರಣ್ ದ್ವಿತೀಯ, 10.5 ಇಡ್ಲಿ ತಿಂದ ನಿರಂಜನ್ ತೃತೀಯ ಸ್ಥಾನ ಪಡೆದರು. ಶಾಸಕ ಎಸ್.ಎನ್.ಚನ್ನಬಸಪ್ಪ ಆಹಾರ ದಸರಾ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ. ಉಮಾ, ಆಹಾರ ಸುರಕ್ಷತಾ ಅಧಿಕಾರಿ ಜಿ.ಸದಾಶಿವಪ್ಪ ತೀರ್ಪುಗಾರರಾಗಿದ್ದರು. ಡಿಎಫ್‌ಒ ಪ್ರಸನ್ನಕೃಷ್ಣ ಪಟಗಾರ್, ಆಹಾರ ದಸರಾದ ಕಾರ್ಯದರ್ಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
9 ಬಾಳೆಹಣ್ಣು ತಿಂದ ಮಹಿಳೆಗಿಲ್ಲ ಬಹುಮಾನ
ಅರಣ್ಯ ಇಲಾಖೆ ಸಿಬ್ಬಂದಿಗೆ ಏರ್ಪಡಿಸಿದ್ದ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಗೀತಾ ಎಂಬುವರು ಎರಡೇ ನಿಮಿಷದಲ್ಲಿ ಬರೋಬ್ಬರಿ 9 ಬಾಳೆಹಣ್ಣು ತಿಂದಿದ್ದರು. ಆದರೆ ಆಕೆ ಅರಣ್ಯ ಇಲಾಖೆ ಸಿಬ್ಬಂದಿಯಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಆಹಾರ ದಸರಾ ಸಮಿತಿಯವರು ಬಹುಮಾನ ಹಿಂಪಡೆದರು. ಹಾಗಾಗಿ 5.5 ಬಾಳೆಹಣ್ಣು ತಿಂದ ಎನ್.ಮಂಜುಳಾ ಅವರಿಗೆ ಅದೃಷ್ಟ ಒಲಿದು ಪ್ರಥಮ ಸ್ಥಾನ ಪಡೆದರು. ಐದುಕಾಲು ಹಣ್ಣು ತಿಂದ ರೇಖಾ ದ್ವಿತೀಯ ಮತ್ತು ನಾಲ್ಕು ಮುಕ್ಕಾಲು ಹಣ್ಣು ಗುಳುಂ ಮಾಡಿದ ಶಶಿಕಲಾ ತೃತೀಯ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಶಂಕರ ವಲಯ ನೌಕರ ಪ್ರಸನ್ನಕುಮಾರ್ 9 ಬಾಳೆಹಣ್ಣು ತಿಂದು ಪ್ರಥಮ ಸ್ಥಾನ ಪಡೆದರೆ, 8.5 ಹಣ್ಣು ತಿಂದ ಗಣೇಶ್ ದ್ವಿತೀಯ ಮತ್ತು ಏಳುಕಾಲು ಹಣ್ಣು ತಿಂದ ಸೆಲ್ವಮಣಿ ತೃತೀಯ ಸ್ಥಾನ ಪಡೆದರು. ಬಾಳೆಹಣ್ಣು ಮತ್ತು ಇಡ್ಲಿ ತಿನ್ನುವ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ ಗ್ರೈಂಡರ್, ದ್ವಿತೀಯ ಮಿಕ್ಸರ್ ಮತ್ತು ತೃತೀಯ ಬಹುಮಾನವಾಗಿ ತವಾ ವಿತರಿಸಲಾಯಿತು.