ಮೈಲಾರಿ ಹೋಟೆಲ್‌ನಲ್ಲಿ ಇಡ್ಲಿ, ದೋಸೆ ಸವಿದ ಸಿಎಂ

mysore
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಗ್ಗೆ ನಗರದ ನಜರ್‌ಬಾದ್‌ನಲ್ಲಿರುವ ಮೈಲಾರಿ ಹೋಟೆಲ್‌ನಲ್ಲಿ ಇಡ್ಲಿ, ದೋಸೆ ಸವಿದರು.


ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ತಿಂದು ಬಹಳ ದಿನವಾಗಿತ್ತು. ಅದಕ್ಕೆ ಅಂತ ಹೋಗಿದ್ದೆ. ಅಲ್ಲಿಗೆ ಹೋಗಬೇಕೆಂದು ನಿನ್ನೆಯೇ ಪ್ಲಾೃನ್ ಮಾಡಿದ್ದೆ. ಹೀಗಾಗಿ, ಹೋಗಿ ತಿಂಡಿ ತಿಂದು ಬಂದಿರುವೆ ಎಂದು ಸುದ್ದಿಗಾರರಿಗೆ ಹೇಳಿದರು.

ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ, ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಕೆ. ಮರೀಗೌಡ ಮತ್ತಿತರರು ಇದ್ದರು.
‘ಇಲ್ಲಿ ತಿಂಡಿ ತಿನ್ನುವಾಗ ನನ್ನ ಕಾಲೇಜು ದಿನಗಳು ನೆನಪಾದವು. ನನ್ನ ಬದುಕಿನ ಅವಿಸ್ಮರಣೀಯ ನೆನಪುಗಳೆಲ್ಲವೂ ಮೈಸೂರಿನ ಜತೆ ಬೆಸೆದುಕೊಂಡಿವೆ. ಮೈಸೂರು ನನಗೆ ಹುಟ್ಟೂರು ಮಾತ್ರವಲ್ಲ, ಬದುಕು ಕೊಟ್ಟ ಸ್ಥಳ. ದೈಹಿಕವಾಗಿ ದೂರವಿದ್ದಾಗಲೂ ಮೈಸೂರಿನ ನೆನಪು ಮನಸ್ಸಿಗೆ ಸದಾ ಹತ್ತಿರವಾಗಿರುತ್ತದೆ. ಈ ಮಣ್ಣಿನ ಋಣ ಬಹಳ ದೊಡ್ಡದು. ಅದರೆದುರು ನಾವು ಸಣ್ಣವರು ಎಂದು ‘ಎಕ್ಸ್’ನಲ್ಲಿ ಟ್ವೀಟ್ ಮಾಡಿದ್ದಾರೆ.

ರಿಲ್ಯಾಕ್ಸ್ ಮೂಡ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಇಡೀ ದಿನ ನಗರದಲ್ಲೇ ವಿಶ್ರಾಂತಿ ಪಡೆದುಕೊಂಡರು.

ಗುರುವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ ಅವರು, ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಸಂಭವಿಸಿದ ಅನಾಹುತದಲ್ಲಿ ಇಡೀ ಕುಟುಂಬ ಮೃತಪಟ್ಟ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೈಸೂರು ತಾಲೂಕಿನ ಜಯಪುರದ ಕೆ.ಸಾಲುಂಡಿ ಗ್ರಾಮಕ್ಕೆ ತೆರಳಿ, ಕಲುಷಿತ ನೀರು ಕುಡಿದು ಮೃತಪಟ್ಟ ಕನಕರಾಜು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಸಂಜೆ ಅಂತರ್ಜಾತಿ ವಿವಾಹಿತರ ಸಭೆ, ಬುದ್ಧ ಜಯಂತಿಯಲ್ಲಿ ಪಾಲ್ಗೊಂಡ ಬಳಿಕ ನಗರದಲ್ಲಿರುವ ತಮ್ಮ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು.


ಬೆಳಗ್ಗೆ ಹೋಟೆಲ್‌ಗೆ ಹೋಗಿ ಉಪಾಹಾರ ಸೇವನೆ ಮಾಡಿ ಮನೆಗೆ ವಾಪಸ್‌ಬಂದು ವಿರಮಿಸಿದರು. ದಿನವಿಡೀ ಮನೆಯಲ್ಲಿದ್ದರೂ ಸಾರ್ವಜನಿಕರನ್ನು ಅವರು ಭೇಟಿ ಮಾಡಲಿಲ್ಲ. ಅವರ ಪುತ್ರ, ಮಾಜಿ ಶಾಸಕ ಡಾ.ಯತೀಂದ್ರ ಸಾರ್ವಜನಿಕರ ಅಹವಾಲು ಆಲಿಸಿದರು.

ಆಪ್ತರೊಂದಿಗೆ ಲೋಕಾರೂಢಿಯಾಗಿ ಮಾತನಾಡಿಕೊಂಡು ಸಿಎಂ ಕಾಲಕಳೆದರು.ಶನಿವಾರವೂ ನಗರದಲ್ಲೇ ಸಿಎಂ ವಾಸ್ತವ್ಯ ಹೂಡಲಿದ್ದಾರೆ. ಬೆಳಗ್ಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ತೆರಳಿ, ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥೇಶ್ವರನ ದರ್ಶನ ಪಡೆದು, ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಪುನಃ ಅದೇ ವಿಮಾನದಲ್ಲಿ ನಗರಕ್ಕೆ ಆಗಮಿಸಿ ವಿಶ್ರಾಂತಿ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net