

ಹುಬ್ಬಳ್ಳಿ: ಇಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಕಳೆದ ಬಾರಿ ಸುಪ್ರೀಂ ಕೋರ್ಟ್ ಆದೇಶದ ನಂತರ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಶಾಂತಿ, ಸೌಹಾರ್ದದಿಂದ ಹಬ್ಬ ಆಚರಣೆ ಮಾಡಲಾಗಿದೆ. ಈ ವರ್ಷವೂ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ಚನ್ನಮ್ಮ ಮೈದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ ಇದು ಪಾಲಿಕೆ ಜಾಗ, ಅದರಲ್ಲಿ ವರ್ಷದಲ್ಲಿ ಎರಡು ಬಾರಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಅನುಮತಿ ನೀಡಿದೆ. ಉಳಿದಂತೆ ಸಾರ್ವಜನಿಕ ಉತ್ಸವಗಳನ್ನು ಮಾಡಲು ಏನೂ ಅಭ್ಯಂತರವಿಲ್ಲ.
ಆದರೂ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕು. ಟಿಪ್ಪು ಜಯಂತಿಯನ್ನು ಅಲ್ಲಿ ಮಾಡಿದ್ದಾರೆ. ನಾವು ಗಣೇಶನ ಪ್ರತಿಷ್ಠಾಪನೆಗೆ ಮನವಿ ಮಾಡಿದರೆ ಅವಕಾಶ ಕೊಡುತ್ತಿಲ್ಲ. ಅನುಮತಿ ಕೊಡಲಿ ಬಿಡಲಿ ನಾವು ಗಣೇಶನ ಪ್ರತಿಷ್ಠಾಪನೆ ಮಾಡಿಯೇ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಅನುಮತಿ ಕೊಡಬೇಡಿ ಎಂದವರು ದೇಶ ವಿರೋಧಿ ಸಂಟನೆಗಳು. ಇದು ಪಾಲಿಕೆ ಜಾಗ, ಇದರಲ್ಲಿ ಸರ್ಕಾರದ ಹಸ್ತೇಪ ಬರುವುದಿಲ್ಲ. ಗಣಪತಿ ಆರಾಧಕರ ಪರವಾಗಿ ನಾನು ಮಾತಾಡಿದ್ದೇನೆ. ಜನರ ಭಾವನೆಯನ್ನು ನಾನು ಸರ್ಕಾರಕ್ಕೆ ಮುಟ್ಟಿಸುತ್ತೇನೆ.
ಪಾಲಿಕೆ ಕಮಿಷನರ್ ಸರ್ಕಾರಕ್ಕೆ ಕೇಳೋ ಅವಶ್ಯಕತೆ ಇಲ್ಲ. ಗಣೇಶ ಹಬ್ಬ ಮಾಡಿದರೆ ಅಲ್ಪಸಂಖ್ಯಾತರು ಸಿಟ್ಟಾಗುತ್ತಾರೆ ಎಂದು ಕಾಂಗ್ರೆಸ್ ತಿಳಿದುಕೊಂಡಿದೆ. ಹೀಗಾಗಿ ಅನುಮತಿ ತಡ ಮಾಡುತ್ತಿದೆ ಎಂದು ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.