ಗಂಡಾಂತರ ಗರ್ಭಿಣಿಯರ ಗುರುತಿಸಿ ಚಿಕಿತ್ಸೆ

31-DVD-1
ದೇವದುರ್ಗ ತಾಲೂಕು ವಂದಲಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಗರ್ಭಿಣಿಯರಿಗೆ ಅರಿವು ಮೂಡಿಸಿದರು. ಡಾ.ನಂದಿತಾ, ಡಾ.ಎಂ.ಸರೋಜಾ, ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಇತರರಿದ್ದರು.
Published on

ದೇವದುರ್ಗ: ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ನಿರ್ಲಕ್ಷ್ಯ ಮಾಡದೆ ಕಾಲಕಾಲಕ್ಕೆ ತಪಾಸಣೆ ಮಾಡಿಸಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಹೇಳಿದರು.

ತಾಲೂಕಿನ ವಂದಲಿ ಗ್ರಾಮದಲ್ಲಿ ಆಯೋಜಿಸಿದ್ದ ಗರ್ಭಿಣಿ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಹಾಗೂ ಮನೆಮನೆ ಭೇಟಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಗ್ರಾಮದಲ್ಲಿ 11,340 ಜನಸಂಖ್ಯೆಯಿದ್ದು, 1,797 ಮನೆಗಳಲ್ಲಿ 68ಗರ್ಭಿಣಿಯರಿದ್ದಾರೆ.

ಇದರಲ್ಲಿ 18 ಗಂಡಾಂತರ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಆರೋಗ್ಯ ಸೌಲಭ್ಯ ಹಾಗೂ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಗಂಡಾಂತರ ಗರ್ಭಿಣಿಯರಿಗೆ ಪ್ರಾಥಮಿಕ ಹಂತದಲ್ಲಿ ಹೆಚ್ಚಿನ ಆರೋಗ್ಯ ಕಾಳಜಿ ವಹಿಸಲಾಗುತ್ತದೆ. ಸ್ಕ್ಯಾನಿಂಗ್, ರಕ್ತ ತಪಾಸಣೆ, ಪ್ರತಿತಿಂಗಳು 9ನೇ ತಾರೀಖು ಆರೋಗ್ಯ ಸೇವೆ ನೀಡಲಾಗುತ್ತಿದೆ. ಪ್ರತಿವಾರ ಗರ್ಭಿಣಿಯರ ನೋಂದಣಿ, ಲಸಿಕೆ ನೀಡುವುದು, ಪೌಷ್ಟಿಕ ಆಹಾರ ಸೇವನೆ, ರಕ್ತ ಹೀನತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಐದು ವರ್ಷದೊಳಗಿನ ಮಕ್ಕಳಿಗೆ ಬಾಲಕ್ಷಯ, ಪೋಲಿಯೋ, ಗಂಟಲುಮಾರಿ, ಜಾಂಡೀಸ್, ಅತಿಸಾರ, ನಾಯಿ ಕೆಮ್ಮು, ಧನುರ್ವಾಯು, ದಢಾರ, ರುಬೆಲ್ಲ, ಮಿದುಳು ಜ್ವರ ಆವರಿಸುವ ಸಾಧ್ಯತೆಯಿದೆ. ಈ ರೋಗಗಳಿಂದ ರಕ್ಷಣೆ ಮಾಡಲು ಶಿಬಿರ ನಡೆಸಿ ಲಸಿಕೆ ಹಾಕಲಾಗುತ್ತಿದೆ. ಪಾಲಕರು ಮಕ್ಕಳನ್ನು ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ಕೊಡಿಸಬೇಕು ಎಂದರು. ಸಮುದಾಯ ಆರೋಗ್ಯ ಅಧಿಕಾರಿ ಡಾ.ಎಂ.ಸರೋಜಾ, ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಪ್ರಮುಖರಾದ ಶಿವಪ್ಪ, ಬಸವರಾಜ, ನಾಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net