ಸಂವಿಧಾನಬದ್ಧ ಹಕ್ಕು ಪಡೆಯಲು ಕೊಡವರೆಂದೇ ಗುರುತಿಸಿಕೊಳ್ಳಿ: ಎನ್.ಯು.ನಾಚಪ್ಪ

cnc
Published on

ಮಡಿಕೇರಿ: ರಾಷ್ಟ್ರೀಯ ಜನಗಣತಿಯ ಸಂದರ್ಭ ಆದಿಮಸಂಜಾತ, ಇಂಡಿಜಿನಸ್, ಆ್ಯನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಕೊಡವರ ಪ್ರತ್ಯೇಕ ಗುರುತು ದಾಖಲೀಕರಣವಾದರೆ ಮಾತ್ರ ಕೊಡವರಿಗೆ ಸಂವಿಧಾನಬದ್ಧ ಹಕ್ಕು ದೊರೆಯಲು ಸಾಧ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.

ಕೇಂದ್ರ ಸರ್ಕಾರದ ಮೂಲಕ ೨೦೨೬ ಅಕ್ಟೋಬರ್‌ನಿಂದ ನಡೆಯಲಿರುವ ಭಾರತ ದೇಶದ ೧೬ನೇ ರಾಷ್ಟ್ರೀಯ ಜನಗಣತಿಯ ಸಂದರ್ಭ ಎಲ್ಲಾ ಮೂರು ಕಾಲಂನಲ್ಲಿ ಕೊಡವ ಎಂದೇ ಬರೆಸಬೇಕೆಂಬ ಕರೆಯೂ ಸೇರಿದಂತೆ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಚೆಟ್ಟಳ್ಳಿಯಲ್ಲಿ  ನಡೆದ ೧೫ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

೨೦೨೬-೨೭ರಲ್ಲಿ ನಡೆಯಲಿರುವ ೧೬ನೇ ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ(ಆ್ಯನಿಮಿಸ್ಟಿಕ್) ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್‌ನ್ನು ಅಳವಡಿಸಬೇಕು. ಇದರ ಆಧಾರದಡಿ ಮುಂದೆ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕ್ಷೇತ್ರ ಪುನರ್ ವಿಂಗಡಣೆಗೆ ಮಾನದಂಡವಾಗಲಿರುವ ಈ ಜನಗಣತಿಯು ಕೊಡವರ ರಾಜಕೀಯ ಸಬಲೀಕರಣ, ಸ್ವಯಂ ನಿರ್ಧಾರದ ಹಕ್ಕು ಸ್ಥಾಪಿಸಲು ಮೆಟ್ಟಿಲಾಗಲಿದೆ. ಅಲ್ಲದೆ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ಹಕ್ಕು ಚಿರಸ್ಥಾಯಿಯಾಗಿ ಮುಂದುವರಿಯಲು ಪೂರಕವಾಗಲಿದೆ ಎಂದರು.

ಕೊಡವರು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಲ್ಲ. ಇಂದು ಜನಗಣತಿಯೂ ಸೇರಿದಂತೆ ರಾಜ್ಯ ದಾಖಲೆಗಳ ಎಲ್ಲಾ ಕಾಲಂಗಳಲ್ಲಿ ಈ ದೇಶದ ಬಹುಧರ್ಮ, ಪ್ರಭಲಧರ್ಮ ಮತ್ತು ಬಲಾಢ್ಯ ಜಾತಿಯನ್ನು ದೃಷ್ಟಿಯಲ್ಲಿಟ್ಟು ರಚಿಸಲ್ಪಟ್ಟಿರುವ ಧರ್ಮ ಮತ್ತು ಜಾತಿ ಬಗ್ಗೆ ಮಾತ್ರ ಉಲ್ಲೇಖ ಇರುವುದರಿಂದ ಆ್ಯನಿಮಿಸ್ಟಿಕ್ ನಂಬಿಗೆಯ ಕೊಡವರು ಅನಿವಾರ್ಯವಾಗಿ ಧರ್ಮ ಮತ್ತು ಜಾತಿ ಕಾಲಂಗಳನ್ನು ಒಪ್ಪಿಕೊಂಡು ಕೊಡವ ಎಂದು ದಾಖಲಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬುಡಕಟ್ಟು ಕೊಡವರಲ್ಲಿ ಯಾವುದೇ ಉಪಜಾತಿ-ಉಪವರ್ಗ, ಉಪ ಪಂಗಡಗಳಿಲ್ಲ. ಧರ್ಮ ಪರಿವರ್ತನೆ/ಧರ್ಮಧೀಕ್ಷೆ ಮೂಲಕ ಕೊಡವರ ಸಂಖ್ಯೆ ವೃದ್ಧಿಸುವ ಪದ್ಧತಿಯೂ ಇಲ್ಲ. ಕೊಡವರು ಯಾವುದೇ ಮಿಶನರಿ ಧರ್ಮವಲ್ಲ. ಕೊಡವರಲ್ಲಿ ಧರ್ಮಗರು-ರಾಜಗುರು ಪದ್ಧತಿ ಇಲ್ಲ. ಸಂವಿಧಾನವೇ ನಮಗೆ ರಾಜಗುರು, ಧರ್ಮಗುರು. ಆದ್ದರಿಂದ ಕೊಡವರಿಗೆ ರಾಜ್ಯಾಂಗ ಖಾತ್ರಿ ದೊರಕಬೇಕು. ಆ ಮೂಲಕ ಪ್ರಪಂಚದ ಅತ್ಯಂತ ದೊಡ್ಡ ಜನಾಂಗೀಯ ವೈವಿದ್ಯತೆಯ ಮತ್ತು ಬೃಹತ್ ಸಂವಿಧಾನಿಕ ಪಾರ್ಲಿಮೆಂಟರಿ ಪಾರ್ಟಿಸಿಪೇಟರಿ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ನಮ್ಮ ಅಸ್ತಿತ್ವ, ಹೆಗ್ಗುರುತು, ಅಸ್ಮಿತೆ ಉಳಿಯುವುದರೊಂದಿಗೆ ನಮ್ಮ ಜನ್ಮಭೂಮಿಯಲ್ಲಿ ನಮ್ಮ ಚಾರಿತ್ರಿಕ ನಿರಂತರತೆಗೆ ಕಾಯ್ದೆ ಬದ್ಧ ರಕ್ಷಣೆ ದೊರಕಬೇಕಾದರೆ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವ ಎಂದು ದಾಖಲಿಸಬೇಕು. ಈ ಸಂಬಂಧ ಈಗಾಗಲೇ ಈ ರಾಷ್ಟ್ರದ ನುರಿತ ಸಂವಿಧಾನ ತಜ್ಞರು ಮಾನವ ಶಾಸ್ತ್ರ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಮತ್ತು ರಾಜಕೀಯ ಶಾಸ್ತ್ರ ವಿಜ್ಞಾನಿಗಳ ಜೊತೆ ಸಂಪರ್ಕ ಮತ್ತು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಇದೇ ಸಂದರ್ಭ ಎನ್.ಯು.ನಾಚಪ್ಪ ಹೇಳಿದರು.

ಈ ಸಂದರ್ಭದಲ್ಲಿ ಚೋಳಪಂಡ ಜ್ಯೋತಿ ನಾಣಯ್ಯ, ಪಳಂಗಂಡ ಸುಮಿ ಅಪ್ಪಯ್ಯ, ಚೋಳಪಂಡ ತಾಜ ಕಾಳಯ್ಯ, ಪಳಂಗಂಡ ಗೀತಾ ಸುಬ್ರಮಣಿ, ಮುಳ್ಳಂಡ ಮಾಯಮ್ಮ, ಬಲ್ಲಾರಂಡ ಸ್ವಾತಿ ನಾಣಯ್ಯ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಪುತ್ತರಿರ ಸೀತಮ್ಮ ಮೊಣ್ಣಪ್ಪ, ಅಡಿಕೇರ ಶಾಂತಿ, ಪುತ್ತರಿರ ಲತಾ ಜೋಯಪ್ಪ, ಪೊರಿಮಂಡ ದಿನಮಣಿ ಪೂವಯ್ಯ, ಚೋಳಪಂಡ ನಾಣಯ್ಯ, ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚೆಂಗಪ್ಪ, ಬಿದ್ದಂಡ ಅಚ್ಚಯ್ಯ, ಕೊಂಗೇಟಿರ ಅನಿಲ್ ಕುಟ್ಟಪ್ಪ, ಬಿದ್ದಂಡ ಮಾದಯ್ಯ, ಕಡೇಮಾಡ ವಿನ್ಸಿ ಅಪ್ಪಯ್ಯ, ಪುತ್ತರಿರ ಕರುಣ್ ಕಾಳಯ್ಯ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net