

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿ ವಿದ್ಯಾರ್ಥಿ ತನ್ನಲ್ಲಿ ಒಂದಲ್ಲ ಒಂದು ಪ್ರತಿಭೆ ಹೊಂದಿರುತ್ತಾನೆ. ಆ ಪ್ರತಿಭೆ ಗುರುತಿಸಿ ವಿದ್ಯಾರ್ಥಿಗೆ ಉತ್ತೇಜನ ನೀಡುವ ಜವಾಬ್ದಾರಿ ಉಪನ್ಯಾಸಕನ ಮೇಲಿರುತ್ತದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪನಿರ್ದೇಶಕ ಕೆ.ಪಿ. ಸುರೇಶ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್‌ನ ಆರ್.ಎಸ್. ಹುಕ್ಕೇರಿಕರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಉಪನ್ಯಾಸಕರಿಗೆ ಜಿಲ್ಲಾ ಉಪನ್ಯಾಸಕರ ವೇದಿಕೆ, ಉಪನಿರ್ದೇಶಕರ ಕಚೇರಿ ಹಾಗೂ ಕಾಲೇಜಿನ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜೀವಶಾಸ್ತ್ರ ವಿಷಯದಲ್ಲಿ ಫಲಿತಾಂಶ ಸುಧಾರಣಾ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಜೆಎಸ್‌ಎಸ್ ಅಭಿವೃದ್ಧಿ ಅಧಿಕಾರಿ ಡಾ. ಸೂರಜ್ ಜೈನ್ ಮಾತನಾಡಿ, ಉಪನ್ಯಾಸಕರು ಕಾರ್ಯಾಗಾರದ ಸದುಪಯೋಗ ಪಡೆದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಹೆಚ್ಚಿನ ಅಂಕ ಗಳಿಸಲು ಪ್ರೇರೇಪಿಸಬೇಕು. ಇದರಿಂದ ಕಾಲೇಜಿನ ಜತೆಗೆ ಪಾಲಕರ ಕೀರ್ತಿಯೂ ಹೆಚ್ಚಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಭಾರತಿ ಶಾನಭಾಗ ಮಾತನಾಡಿ, ಇಂತಹ ಕಾರ್ಯಾಗಾರಗಳು ಬೋಧನಾ ಗುಣಮಟ್ಟ ಹೆಚ್ಚಿಸಲಿವೆ. ಅಲ್ಲದೆ ಬೋಧಕರು ತಮ್ಮ ಬೋಧನೆಯಲ್ಲಿನ ಲೋಪಗಳನ್ನು ಕಂಡುಕೊಂಡು ಉತ್ತಮ ಬೋಧಕರಾಗಿ ರೂಪಗೊಳ್ಳಲು ನೆರವಾಗುತ್ತವೆ ಎಂದರು.
ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಸಯ್ಯದ ಫಯಾಜ ಅಹ್ಮದ್ ಉಪನ್ಯಾಸ ನೀಡಿದರು. ಡಾ. ಸತ್ಯನಾರಾಯಣ ಹೆಬ್ಬಾರ, ಡಾ. ವಿಜಯಲಕ್ಷ್ಮೀ ದಂಡಿನ, ಇತರರು ಇದ್ದರು. ವಿವಿಧ ಕಾಲೇಜುಗಳಿಂದ ಸುಮಾರು 100ಕ್ಕೂ ಹೆಚ್ಚಿನ ಉಪನ್ಯಾಸಕರು ಭಾಗವಹಿಸಿದ್ದರು.