ಶಾಲೆ, ಸ್ಮಶಾನ ಜಾಗ ಗುರುತಿಸಿ ದಾಖಲೆ ಸಲ್ಲಿಸಿ: ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚನೆ

14
Published on

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಸರ್ಕಾರಿ ಶಾಲೆ, ಸ್ಮಶಾನ ಜಾಗವನ್ನು ಗುರುತಿಸಿ ಆಸ್ತಿ ದಾಖಲೆಗಳನ್ನು ಮಾರ್ಚ್ ಅಂತ್ಯದೊಳಗೆ ವಿತರಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದರು.

ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಸ್ಮಶಾನ ಮತ್ತು ಎಲ್ಲ ಸರ್ಕಾರಿ ಶಾಲೆಗಳಲ್ಲಿನ ಆಸ್ತಿ ದಾಖಲೆಗಳನ್ನು ಸಿದ್ಧ ಪಡಿಸಬೇಕು. ಶೀಘ್ರ ಸರ್ವೇ ಕಾರ್ಯ ಮುಗಿಸಿ ಈ ತಿಂಗಳ ಅಂತ್ಯದೊಳಗೆ ವಿತರಿಸಲು ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.

ಸರ್ಕಾರಿ ಶಾಲೆಗಳ ಜಾಗದ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದಾಗ ಸಾಕಷ್ಟು ಅಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳ ಜಾಗದ ಸಂಬಂಧ ಸರ್ವೆ ನಡೆಸಲು ಸಾಧ್ಯವಾಗಿಲ್ಲ. ಇದರಿಂದ ಆಸ್ತಿಯನ್ನು ಶಾಲೆಯ ಹೆಸರಿಗೆ ನೋಂದಣಿ ಮಾಡಲು ಆಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಅಧಿಕಾರಿಗಳ ಮಾತಿಗೆ ಬೇಸರ ವ್ಯಕ್ತಪಡಿಸಿದ ಜಿ.ಟಿ.ದೇವೇಗೌಡ ಅವರು, ಸರ್ಕಾರಿ ಶಾಲೆಗಳ ಆರಂಭವಾಗಿ ಹಲವು ವರ್ಷಗಳು ಕಳೆದಿದ್ದರೂ ದಾಖಲಾತಿಗಳು ಪೂರ್ಣ ಆಗಿಲ್ಲ. ಹೀಗಾಗಿ ಗ್ರಾಪಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ನಿಯೋಗದಿಂದ ಸರ್ವೇ ಮಾಡಿ ಶೇ. 70ರಷ್ಟು ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಶೇ.30ರಷ್ಟು ಆಗಿಲ್ಲ. ಸರ್ವೇ ಆಗದೆ ಇರುವ ಆಸ್ತಿಯನ್ನು ಶೀಘ್ರವೇ ಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು.

ಸಿಎಸ್‌ಆರ್ ಅನುದಾನ ಬಳಸಿ:

ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಕೈಗಾರಿಕೆಗಳಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಬಂಧ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಎಸ್‌ಆರ್ ಅನುದಾನ ಪಡೆದುಕೊಳ್ಳಬೇಕು. ಈ ಮೂಲಕ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು.

ಪ್ರತಿಯೊಂದು ಗ್ರಾಮಗಳಲ್ಲಿ ಸ್ಮಶಾನ ಇರಬೇಕು. ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಜಾಗ ಗುರುತಿಸುವ ಕಾರ್ಯ ಆಗಬೇಕು. ಕೆಲವೆಡೆ ಗ್ರಾಮ ಠಾಣಾ, ಸರ್ವೇ ಸಂಖ್ಯೆ ವ್ಯತ್ಯಾಸ ಇದ್ದರೆ ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದರು.

ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಬೇಕು. ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಹೊಸ ಕಟ್ಟಡ ನಿರ್ಮಿಸಿಕೊಳ್ಳಬೇಕು. ಮಕ್ಕಳೇ ಇಲ್ಲದಿರುವ ಅಂಗನವಾಡಿಯ ಕಾರ್ಯಕರ್ತರು, ಮನೆಗಳಿಗೆ ತೆರಳಿ ಪಾಲಕರಿಗೆ ಮನವರಿಕೆ ಮಾಡಿ ಮಕ್ಕಳನ್ನು ಕರೆತರಬೇಕು. ಯಾವ ದಿನ ಯಾವ ಯಾವ ಆಹಾರ ನೀಡಲಾಗುತ್ತಿದೆ ಎನ್ನುವ ಮಾಹಿತಿಯುಳ್ಳ ಕರಪತ್ರವನ್ನು ನೀಡಬೇಕು. ಆದರೆ ಸರಿಯಾಗಿ ಈ ಕಾರ್ಯ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ನೀರಿನ ಸಮಸ್ಯೆ ಆಗಬಾರದು:

ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಆಗಬಾರದು. ಈಗಾಗಲೇ ಕಬಿನಿ, ಕಾವೇರಿ ನದಿಗಳಿಂದ ನೀರು ತರಲಾಗುತ್ತಿದೆ. ಮುಖ್ಯಮಂತ್ರಿಗಳಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಮನವಿ ಮಾಡಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆಗೆ ತೊಂದರೆ ಆಗದಂತೆ ಸಜ್ಜಾಗಬೇಕು ಎಂದರು.

ವಿವಿಧ ಇಲಾಖೆಗಳ 30ಕ್ಕೂ ಹೆಚ್ಚು ವಸತಿ ನಿಲಯಗಳು ಕ್ಷೇತ್ರದಲ್ಲಿವೆ. ಎಲ್ಲ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಗುಣಮಟ್ಟದ ಆಹಾರ ಒದಗಿಸಬೇಕು. ಹಾಸ್ಟೆಲ್ ವಾರ್ಡ್‌ನ್‌ಗಳು ದಬ್ಬಾಳಿಕೆ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ತಿಂಗಳಿಗೊಮ್ಮೆ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಬೇಕೆಂದು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕ್ಷೇತ್ರದಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಹೆಚ್ಚಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತೋಟಗಾರಿಕೆ ಬೆಳೆಗೆ ಪ್ರೋತ್ಸಾಹ ನೀಡಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ವೀಳ್ಯದೆಲೆ, ಮೈಸೂರು ಮಲ್ಲಿಗೆ, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಯ ಕ್ಷೇತ್ರೋತ್ಸವ ನಡೆಸಬೇಕು ಎಂದು ಸೂಚನೆ ನೀಡಿದರು.

ಅಕ್ರಮ ಪಂಪ್‌ಸೆಟ್ ಇದ್ದರೆ ಬೆಳೆಯ ದೃಷ್ಟಿಯಿಂದ ವಿದ್ಯುತ್ ಕಡಿತಗೊಳಿಸದೆ ಹಣ ಕಟ್ಟಿಸಿಕೊಂಡು ಸಕ್ರಮ ಮಾಡಬೇಕು. ಏಕಲವ್ಯ ನಗರಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗ್ರಾಮೀಣ ಪ್ರದೇಶದವರಿಗೆ ಸರ್ಕಾರಿ ಸಲವತ್ತುಗಳ ಜಾಗೃತಿ ಮೂಡಿಸಬೇಕು. ಆರೋಗ್ಯ ಆಯುಷ್ಮಾನ್ ಕಾರ್ಡ್ ಕಡ್ಡಾಯ ವಿತರಿಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಮಹೇಶ್‌ಕುಮಾರ್, ತಾಪಂ ಇಒ ಕೃಷ್ಣ ಇದ್ದರು.

‘ಬಿ’ ಖಾತೆ ವಿತರಿಸಲು ಕ್ರಮಕೈಗೊಳ್ಳಿ

ರಾಜ್ಯಾದ್ಯಂತ ಬಿ ಖಾತೆ ಅಭಿಯಾನ ಆರಂಭವಾಗಿದೆ. ಹೀಗಾಗಿ ಕ್ಷೇತ್ರದಲ್ಲಿಯೇ ಹೆಚ್ಚು ‘ಬಿ’ ಖಾತೆ ವಿತರಿಸಲು ಕ್ರಮಕೈಗೊಳ್ಳಬೇಕು. ಯಾವುದೇ ಅಮೀಷಗಳಿಗೆ ಒಳಗಾಗದೆ ಬಡವರಿಗೆ ಮಾನವೀತೆಯಿಂದ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

30 ವರ್ಷದಿಂದ ಹೊಸ ಬಡಾವಣೆಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರ ಒಂದು ರೂಪಾಯಿ ಅಭಿವೃದ್ಧಿ ಮಾಡಿಲ್ಲ. ಈಗ ಗ್ರಾಪಂ, ಪಟ್ಟಣ ಪಂಚಾಯಿತಿಗೆ ಜವಾಬ್ದಾರಿ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಹಂತ ಹಂತವಾಗಿ ಸಮಸ್ಯೆ ಬಗೆಹರಿಸಿ ಯಶಸ್ವಿಯಾಗಿ ನಿಭಾಯಿಸಬೇಕು ಎಂದು ಸಲಹೆ ಹೇಳಿದರು.

ಗ್ರಾಮ ಪಂಚಾಯಿತಿಯಲ್ಲಿ ವಾಸವಿರುವ ನಿವೇಶನ ರಹಿತರಿಗೆ, ಬಾಡಿಗೆ ಮನೆಯಲ್ಲಿ ಇರುವವರ ಪಟ್ಟಿಯನ್ನು ಸಿದ್ದಪಡಿಸಿಕೊಂಡು ಆಶ್ರಯ ಯೋಜನೆಯಲ್ಲಿ ಮನೆಗಳು ಬಂದಾಗ ಮೊದಲ ಆದ್ಯತೆ ನೀಡಬೇಕು. ಉಳ್ಳವರಿಗೆ ನಿವೇಶನಗಳನ್ನು ಕೊಡಬೇಡಿ. ಬಡವರಿಗೆ ನೆರಳು ಕೊಟ್ಟು ದಿವಂಗತ ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್ ಆಶಯವನ್ನು ಈಡೇರಿಸಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net