

ಮುಳಗುಂದ: ಪ್ರತಿ ಮಗುವಿನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸಿ, ಬೆಳೆಸುವ ಕೆಲಸ ಶಿಕ್ಷಕರು ಮತ್ತು ಪಾಲಕರಿಂದ ಆಗಬೇಕಿದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು ಹೇಳಿದರು.
ಸಮೀಪದ ನೀಲಗುಂದ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂತೂರ-ಬೆಂತೂರ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ/ಕಲೋತ್ಸವದಲ್ಲಿ ಅವರು ಮಾತನಾಡಿದರು. ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದರು.
ಬಸವರಾಜ ಹೊಂಬಳ ಮಾತನಾಡಿ, ಪ್ರತಿ ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದರು. ಶಿಕ್ಷಕರ ಸಂಘದ ನಿರ್ದೇಶಕ ಡಿ.ಎಸ್. ತಳವಾರ, ಎಸ್.ಎಂ. ನವಲಿ. ಸಿಆರ್ಪಿ ಡಿ.ಎಸ್. ಕಳಕಣ್ಣವರ, ವಿ.ಡಿ. ಕಣವಿ, ಶಾಲಾ ಪ್ರಧಾನ ಗುರು ಅಶೋಕ ಚವ್ಹಾಣ ಹಾಗೂ ಕ್ಲಸ್ಟರ್ನ ಎಲ್ಲ ಶಾಲಾ ಶಿಕ್ಷಕರು ಇದ್ದರು.