

ರಾಯಚೂರು: ಯಾವುದೇ ಒಂದು ಯಶಸ್ಸಿಗೆ ಸಂಬಂಸಿದಂತೆ ವ್ಯಕ್ತಿಗಿಂತ ವಿಚಾರಕ್ಕೆ ಮನ್ನಣೆ ಮತ್ತು ಗೌರವ ನೀಡಬೇಕು. ಅಂದಾಗ ಮಾತ್ರ ಆ ಯಶಸ್ಸು ಮುಂದುವರಿದುಕೊಂಡು ಹೋಗಲು ಸಾಧ್ಯವಾಗಲಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮುಖ್ಯಸ್ಥ ಬಸವರಾಜ ಪಾಟೀಲ್ ಸೇಡಂ ಹೇಳಿದರು.
ಸ್ಥಳೀಯ ಸೇವಾ ಕಾಲೇಜು ಸಭಾಂಗಣದಲ್ಲಿ ವಿಕಾಸ ಅಕಾಡೆಮಿಯಿಂದ ಗುರುವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಕಾರ್ಯಕ್ರಮದ ಹಿಂದೆ ಹಲವಾರು ಜನರ ಶ್ರಮವಿರುತ್ತಿದ್ದು, ಒಬ್ಬರಿಗೆ ಮನ್ನಣೆ ನೀಡುವುದು ಸರಿಯಲ್ಲ ಎಂದರು.
ಇಂದಿನ ದಿನಮಾನದಲ್ಲಿ ದುಷ್ಟ ಶಕ್ತಿಗಳ ಜತೆ ಸಂಘರ್ಷ ನಡೆಸಬೇಕಾದ ಸ್ಥಿತಿಯಿದೆ. ಅಲ್ಪತೃಪ್ತಿ ನಮ್ಮನ್ನು ಯಶಸ್ಸಿನಿಂದ ಪಾತಾಳಕ್ಕೆ ಇಳಿಸುತ್ತದೆ. ಒಳ್ಳೆಯ ಕೆಲಸ ಮಾಡುವಾಗ ತೃಪ್ತಿ ಪಡೆದೆ ಕನಸನ್ನು ಬೆಳೆಸುವ ಕೆಲಸ ಮಾಡಬೇಕು. ನಮ್ಮ ಬಗ್ಗೆ, ನಾವು ಮಾಡುವ ಕೆಲಸದ ಬಗ್ಗೆ ಗೌರವ ಹೊಂದಿರಬೇಕು.
ವಿಕಾಸ ಅಕಾಡೆಮಿಯಿಂದ ಜನಾಂಗವನ್ನು ಮುಂದೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದು, ಅಕಾಡೆಮಿಯ ಉಸ್ತುವಾರಿಯನ್ನು ಬಿಸಿ ರಕ್ತಕ್ಕೆ ನೀಡುತ್ತಿದ್ದೇವೆ. ಲಕ್ಷಾಂತರ ಇಂಜಿನಿಯರ್‌ಗಳು ಕೆಲಸವಿಲ್ಲದೆ ಖಾಲಿ ಕುಳಿತಿದ್ದು, ಮಕ್ಕಳ ಭವಿಷ್ಯ ಅಂಧಕಾರದಲ್ಲಿದ್ದು ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ.
2025ರಲ್ಲಿ ಸೇಡಂನಲ್ಲಿ ಸ್ವರ್ಣ ಜಯಂತೋತ್ಸವ ಆಚರಿಸಲಾಗುತ್ತಿದ್ದು, 9 ದಿನಗಳ ಕಾಲ 240 ಎಕರೆ ಪ್ರದೇಶದಲ್ಲಿ ವಿಶಿಷ್ಠ ರೀತಿಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರ ಪೂರ್ವಭಾವಿಯಾಗಿ ಡಿ.3ರಂದು ಬಸವ ಕಲ್ಯಾಣದಲ್ಲಿ ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವರಾಜ ಪಾಟೀಲ್ ಸೇಡಂ ತಿಳಿಸಿದರು.
ವಿಕಾಸ ಅಕಾಡೆಮಿ ಸಂಚಾಲಕ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಕಲೆ, ಸಾಹಿತ್ಯ, ನೈಸರ್ಗಿಕವಾಗಿ ಶ್ರೀಮಂತವಾಗಿದ್ದರೂ ಹಿಂದುಳಿದ ಹಣೆಪಟ್ಟಿಯನ್ನು ಹಚ್ಚಿಕೊಂಡಿದೆ. ನಮ್ಮ ಹಿಂದುಳಿದ ಮಾನಸಿಕತೆ ಹೋಗಲಾಡಿಸಲು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ.
ಕೃಷಿಕರು ಸದೃಢರಾಗಬೇಕು, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಯುವ ಜನಾಂಗ ಸಂಸ್ಕಾರವಂತರಾಗಬೇಕು ಎನ್ನುವ ನಿಟ್ಟಿನಲ್ಲಿ ವಿಕಾಸ ಅಕಾಡೆಮಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅದಕ್ಕಾಗಿ ಗ್ರಾಮಾಂತರ ಪ್ರದೇಶದಲ್ಲಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ, ಈ ಭಾಗದ ಅಭಿವೃದ್ಧಿಗಾಗಿ ಬಸವರಾಜ ಪಾಟೀಲ್ ಸೇಡಂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ಅವರ ಕಳಕಳಿ, ಅವರ ವ್ಯಕ್ತಿತ್ವ ಇಂದಿನ ಪೀಳಿಗೆಗೆ ಪ್ರೇರಣಾದಾಯಕವಾಗಿದೆ. ಅವರ ಕೆಲಸ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಂದಾಪುರ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ವಿಕಾಸ ಅಕಾಡೆಮಿ ಸಂಚಾಲಕ ಸುಭಾಷಚಂದ್ರ ಪಾಟೀಲ್, ಮಹಿಳಾ ಘಟಕದ ಸಂಚಾಲಕಿ ನಿರ್ಮಲಾ ಹಿರೇಮಠ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಕಾರಿಗಳು ಉಪಸ್ಥಿತರಿದ್ದರು.