ಶಾರದಾದೇವಿ ಸಂದೇಶ-ಆದರ್ಶ ಪೀಳಿಗೆಗೆ ದಾರಿದೀಪವಾಗಬೇಕು: ಶುಭವ್ರತ ಪ್ರಾಣಾ ಮಾತಾಜಿ

Sharada mutt
Published on

ಚಿಕ್ಕಮಗಳೂರು: ಶ್ರೀಮಾತೆ ಶಾರದಾದೇವಿಯವರ ಬದುಕು, ತತ್ವ, ಸಂದೇಶ ಮತ್ತು ಆದರ್ಶಗಳು ಇಂದಿನ ಪೀಳಿಗೆಗೆ ದಾರಿದೀಪವಾಗಬೇಕು. ಎಲ್ಲರೂ ಆ ಬೆಳಕಿನಡಿ ಸಾಗುವ ಮೂಲಕ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು ಎಂದು ಶ್ರೀಮಠದ ಅಧ್ಯಕ್ಷೆ ಪ್ರವ್ರಾಜಿಕ ಶುಭವ್ರತ ಪ್ರಾಣಾ ಮಾತಾಜಿ ಕಿವಿಮಾತು ಹೇಳಿದರು.

ನಗರ ಹೊರವಲಯ ಆದಿಶಕ್ತಿನಗರದ ಶಾರದಾ ಮಠದಲ್ಲಿ ಮಂಗಳವಾರ ಶ್ರೀಮಾತೆ ಶಾರದಾ ದೇವಿಯವರ 168ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಸಂದರ್ಭ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಶಾರದಾ ಮಾತೆ ಮಹಾನ್ ಶಕ್ತಿ:
ಶ್ರೀಮಾತೆ ಶಾರದಾದೇವಿಯವರು ತಮ್ಮ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ವೀರ ಸಂನ್ಯಾಸಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ ಮಹಾನ್ ಶಕ್ತಿ ಎಂದರು.

ಭಗವನ್ನಾಮ ಜಪದಿಂದ ನಮ್ಮ ಪ್ರಾರಬ್ಧ ಕರ್ಮದ ತೀಕ್ಷ್ಣತೆ ಕಡಿಮೆಯಾಗುವುದು. ಜಪ, ಧ್ಯಾನ ಮತ್ತು ತಪಸ್ಸಿನಿಂದ ಕರ್ಮದ ಪರಿಣಾಮವನ್ನು ಬಹುಮಟ್ಟಿಗೆ ಹೋಗಲಾಡಿಸಬಹುದು ಎಂದು ಶ್ರೀಮಾತೆಯವರು ಬದುಕಿನುದ್ದಕ್ಕೂ ಪ್ರತಿಪಾದಿಸುತ್ತಿದ್ದರು. ದೌರ್ಬಲ್ಯದ ಸಣ್ಣ ರಂಧ್ರವೂ ಮನುಷ್ಯನೆಂಬ ದೋಣಿಯನ್ನು ಮುಳುಗಿಸಬಲ್ಲುದು ಎಂದು ಎಚ್ಚರಿಸುತ್ತಿದ್ದ ಶ್ರೀಮಾತೆ ಅನೇಕ ಮಂದಿಗೆ ಸಾಧನೆಗಾಗಿ ಮಂತ್ರೋಪದೇಶವನ್ನು ಸಹ ಮಾಡಿದ್ದರು ಎಂದು ತಿಳಿಸಿದರು.

ಮನಸು ದೂರವಾದಲ್ಲಿ ಜಪದಿಂದ ಫಲವಿಲ್ಲ
ಗಾಳಿಯು ಮೋಡವನ್ನು ಚದುರಿಸುವಂತೆ ಭಗವನ್ನಾಮವು ಪ್ರಾಪಂಚಿಕತೆಯ ಮೋಡವನ್ನು ಚದುರಿಸುವುದು. ನಿಜವಾದ ಧ್ಯಾನ ತನ್ನಷ್ಟಕ್ಕೆ ತಾನೇ ಆಗಬೇಕಾದದ್ದು. ಧ್ಯಾನ ಸಾಧ್ಯವಾಗದಿದ್ದಲ್ಲಿ ಜಪವನ್ನು ಮಾಡಬೇಕು. ಮನಸು ದೇವರಿಂದ ದೂರವಾಗಿದ್ದರೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜಪ ಮಾಡಿದರೂ ಫಲವಿಲ್ಲ ಎಂದು ಹೇಳುತ್ತಿದ್ದರು ಎಂದರು.

ಶ್ರೀ ರಾಮಕೃಷ್ಣ ಪರಮಹಂಸರ ದೃಷ್ಟಿಯಲ್ಲಿ ಶಾರದಾಮಾತೆಯವರು ಸಾಕ್ಷಾತ್ ಶಾರದಾ ದೇವಿಯ ಅವತಾರವೇ ಆಗಿದ್ದರು. ಅವರಲ್ಲಿ ರಾಮಕೃಷ್ಣ ಪರಮಹಂಸರು ದೇವಿಯ ಗುಣಗಳನ್ನು ಕಂಡುಕೊಂಡಿದ್ದರು. ಹಾಗಾಗಿ ಶ್ರೀಮಾತೆಯವರನ್ನು ಅವರು ದೇವರ ಪೀಠದಲ್ಲಿ ಕುಳ್ಳಿರಿಸಿ ಅವರಿಗೆ ಹದಿನಾರು ವಿವಿಧ ಬಗೆಯ ಪೂಜೆಗಳನ್ನು ನೆರವೇರಿಸಿದ್ದರು. ತಾವು ಮಾಡಿದ ಆಧ್ಯಾತ್ಮಿಕ ಸಾಧನೆಯ ಫಲವನ್ನು ಶಾರದಾ ದೇವಿಯವರಿಗೆ ಧಾರೆ ಎರೆದಿದ್ದರು ಎಂದು ಹೇಳಿದರು.
ಸೋದರಿ ನಿವೇದಿತಾ ಪ್ರತಿಷ್ಠಾನದ ನಿರ್ದೇಶಕಿ ಇಂದುಶ್ರೀ ಮಾತೆ ಶಾರದಾದೇವಿಯವರ ಬದುಕು ಮತ್ತು ಸಂದೇಶಗಳ ಕುರಿತು ಪ್ರವಚನ ನೀಡಿದರು.
ಜನ್ಮ ದಿನದ ಪ್ರಯುಕ್ತ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಬೆಳಗಿನಿಂದ ಸಂಜೆಯವರೆಗೆ ಶ್ರೀಮಠಕ್ಕೆ ತೆರಳಿ ಶ್ರೀಮಾತೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಧಾರ್ಮಿಕ ಕಾರ್ಯಕ್ರಮ
ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ ಶ್ರೀಮಾತೆ ಶಾರದಾ ದೇವಿಯವರಿಗೆ ಆರತಿ, ಉಷಾ ಕೀರ್ತನೆ, ವೇದಘೋಷ, ವಿಶೇಷ ಪೂಜೆ, ಅಲಂಕಾರ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಶ್ರದ್ಧಾ ಭಕ್ತಿಯಿಂದ ಜರುಗಿತು.

ಇದೇ ವೇಳೆ ಭಕ್ತರಿಂದ ಸಾಮೂಹಿಕ ಭಜನೆ, ಸ್ತೋತ್ರ ಪಠಣ, ನಾಮ ಸಂಕೀರ್ತನೆ ನಡೆದವು. ಶ್ರೀ ಮಠದ ಶ್ರೀ ಅಜಿತ ಪ್ರಾಣಾ ಮಾತಾಜಿ, ಶ್ರೀ ಗೋಪೇಶ ಪ್ರಾಣಾ ಮಾತಾಜಿ ಮತ್ತು ಬ್ರಹ್ಮಚಾರಿಣಿ ಡಾ.ಅನ್ನಪೂರ್ಣ ಅವರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಶಾರದಾ ಮೂಲ ಮಂತ್ರ ಹೋಮ ಮತ್ತು ಶ್ರೀ ರಾಮಕೃಷ್ಣ ಮೂಲಮಂತ್ರ ಹೋಮ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net