

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿವಗಂಗಾ ವೀರಪ್ಪಾ ರಾಮಾಪುರ ದತ್ತಿ ನಿಮಿತ್ತ ಶಿಕ್ಷಣ, ಸಾಮಾಜಿಕ ಕ್ಷೇತ್ರದ ಗಣನೀಯ ಸೇವೆಗೆ ನೀಡುವ 2024ನೇ ಸಾಲಿನ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಸಮಾರಂಭವನ್ನು ಸೆ. 12ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ತಹಮೀನಾ ಹಾಗೂ ಎಸ್.ಎಂ.ಹುಡೇದಮನಿ ಶಿಕ್ಷಕ ದಂಪತಿಗೆ ಪುರಸ್ಕಾರ ನೀಡಲಾಗುತ್ತಿದೆ. ದತ್ತಿ ದಾನಿ, ಕಿರೇಸೂರ ಸರ್ಕಾರಿ ಪ್ರೌಢಶಾಲಾ ಆಂಗ್ಲಭಾಷಾ ಶಿಕ್ಷಕ ಡಾ. ಲಿಂಗರಾಜ ರಾಮಾಪುರ ಅವರ ಹೊಸ ಪರಿಪಾಠ ಹಾಗೂ ಇವರ ಮಗಳು ನೇಹಾ ರಾಮಾಪುರ ಅವರ ನೇಹಾ ರಾಣಿ ಕಥೆಗಳು ಕೃತಿ ಬಿಡುಗಡೆಯಾಗಲಿವೆ.
ಆಕಾಶವಾಣಿ ವಿಶ್ರಾಂತ ನಿರ್ದೇಶಕ ಡಾ. ಬಸು ಬೇವಿನಗಿಡದ ಕೃತಿ ಬಿಡುಗಡೆ ಮಾಡಲಿದ್ದು, ಶ್ರೀಧರ ಗಸ್ತಿ ಕೃತಿಗಳ ಕುರಿತು ಮಾತನಾಡಲಿದ್ದಾರೆ. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.