

ಮಂಡ್ಯ: ಮಕ್ಕಳು ರಾಷ್ಟ್ರದ ಆಸ್ಥಿ, ಸಮಾಜದ ಸಂಪತ್ತು. ಅವರನ್ನು ಒಂದು ಶಕ್ತಿಯಾಗಿ ಮಾರ್ಪಾಡು ಮಾಡುವವರು ಶಿಕ್ಷಕರು. ಇದರೊಟ್ಟಿಗೆ ಮಕ್ಕಳ ವ್ಯಕ್ತಿತ್ವ ರೂಪಿಸಲು ಪಾಲಕರು ಸಮಯ ಮೀಸಲಿಡಬೇಕು ಎಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಸಲಹೆ ನೀಡಿದರು.
ನಗರದ ಕಾಳಿಕಾಂಭ ಸಮುದಾಯ ಭವನದಲ್ಲಿ ಮಲ್ಲಮ್ಮ ಮುಕ್ತಾಂಬ ಸಿದ್ದಲಿಂಗಯ್ಯ ಚಾರಿಟಬಲ್ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಐಡಿಯಲ್ ಮಾಂಟೆಸ್ಸರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳನ್ನು ಜೋಪಾನವಾಗಿ ಕಾಪಾಡಬೇಕು. ಜತೆಗೆ ಪ್ರೇರಣಾ ಶಕ್ತಿಗಳಾಗಬೇಕು. ಅವರ ಬೇಕು ಬೇಡಗಳಿಗೆ ಸಮಯ ಮೀಸಲಿಡಬೇಕು. ಭಾರತದಂತ ದೊಡ್ಡ ರಾಷ್ಟ್ರದಲ್ಲಿ ಹತ್ತು ಹಲವು ಆಯಾಮಗಳಲ್ಲಿ ಶಿಕ್ಷಣ ನೀಡಬೇಕಾದ ಅಗತ್ಯವಿದೆ. ವಿಶ್ವಮಾನವರಾಗಿ ಸಮಾಜದ ಆಸ್ಥಿಯಾಗುವಂತೆ ರೂಪಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ವಿದ್ಯೆಯ ಮನುಷ್ಯನಿಗೆ ಅತ್ಯಂತ ಅವಶ್ಯಕ. ವಿದ್ಯೆ ಮನಸ್ಸನ್ನು ವಿಕಸಿತಗೊಳಿಸುತ್ತದೆ. ಒಳಿತನ್ನು ಉಂಟು ಮಾಡತ್ತದೆ. ಒಳ್ಳೆಯದು ಹಾಗೂ ಕೆಡಕಿನ ವಿಮರ್ಶೆ ಮಾಡುವ ಶಕ್ತಿ ಕೊಡುತ್ತದೆ. ಯಾವುದೇ ಕಟ್ಟಡಕ್ಕೆ ಬುನಾದಿ ಮುಖ್ಯವಾದಂತೆ, ಮಕ್ಕಳು ಮುಂದೆ ದೊಡ್ಡವರಾಗಿ ರಾಷ್ಟ್ರದ, ಸಮಾಜದ ಶಕ್ತಿಯಾಗಬೇಕಾದರೆ ಉತ್ತಮ ಶಿಕ್ಷಣದ ಬುನಾದಿ ಹಾಕಿಕೊಡಬೇಕು ಎಂದರು.
ಸಂಸ್ಥೆಯ ಮುಖ್ಯಸ್ಥೆ ಶಶಿರೇಖಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಖಜಾಂಚಿ ಚಿಕ್ಕವೀರಪ್ಪ, ನೃತ್ಯ ಕೃಪಾ ಕಲಾಶಾಲೆಯ ಚಂದನ್, ಮೋಹನ್, ಶಿಕ್ಷಕಿ ಮಮತಾ ಉಪಸ್ಥಿತರಿದ್ದರು.
ಇದೇ ವೇಳೆ ತರಬೇತಿ ಪಡೆದ ನರ್ಸರಿ ಶಿಕ್ಷಕಿಯರಿಗೆ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.