

ಲಿಂಗಸುಗೂರು: ವಿದ್ಯಾರ್ಥಿಗಳು ಸಂಸ್ಕಾರದೊಂದಿಗೆ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಈ ಮೂಲಕ ಸಮಾಜದಲ್ಲಿ ಶಿಕ್ಷಕರ ಗೌರವ ಹೆಚ್ಚಿಸಬೇಕೆಂದು ವಿವಿ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ 2001-02 ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಶಾಲೆ-ಕಾಲೇಜು ಹಂತದಲ್ಲಿ ಮೋಜು-ಮಸ್ತಿ, ವೇಷ, ಭೂಷಣದ ಬಗ್ಗೆ ಹೆಚ್ಚು ಗಮನ ಹರಿಸದೆ ಆದರ್ಶಮಯ ಜೀವನ ರೂಢಿಸಿಕೊಂಡು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಗುರು-ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿರುತ್ತದೆ. ಹೀಗಾಗಿ ಪುರಾಣ ಕಥೆಗಳ ಕಾಲದಿಂದಲೂ ಗುರುವಿಗೆ ಮಹತ್ವದ ಸ್ಥಾನ ನೀಡಲಾಗಿದೆ. ವಿದ್ಯೆ ಕಲಿಸಿದ ಗುರುವಿನ ಋಣ ತೀರಿಸುವ ಸದುದ್ದೇಶದಿಂದ ಇತ್ತಿಚಿನ ದಿನಗಳಲ್ಲಿ ಗುರುವಂದನಾ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಬಸವಂತರಾಯ ಕುರಿ ಹೇಳಿದರು.
ಶಿಕ್ಷಕರಾದ ಮುರಳೀಧರ ಕುಲಕರ್ಣಿ, ಉಮಾಕಾಂತ, ಶಂಕರ ರಾಠೋಡ್, ಶಕುಂತಲಾ, ಪ್ರೇಮಕುಮಾರಿ, ಅಕ್ಕಮಹಾದೇವಿ, ಮಹೇಶ, ಈರಣ್ಣ, ಸಂಗಮೇಶ, ವೆಂಕಟೇಶ ಜೋಷಿ ಇದ್ದರು.