ಸೌಹಾರ್ದ ಕೆಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

udp-15-i day 2A
Published on

ಉಡುಪಿ: ರಾಜ್ಯ ಸರ್ಕಾರ ಸಂವಿಧಾನ?ದಆಶಯಗಳಂತೆ ಸಮಾಜವಾದಿ, ಜಾತ್ಯಾತಿತ, ಪ್ರಜಾಸತ್ತಾತ್ಮಕ ಮೌಲ್ಯಗಳ ಹಾದಿಯಲ್ಲಿಕೆಲಸ ಮಾಡಲಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಮಹತ್ವ ನೀಡಲಿದೆ.ನೈತಿಕ ಪೊಲೀಸ್​ ಗಿರಿಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹರಡುವ,ಸೌಹಾರ್ದ ಕೆಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕಸಮಾಜದಲ್ಲಿ ಹದಗೆಟ್ಟಿದ್ದ ಸಾಮರಸ್ಯದ ವಾತಾವರಣ ಮರುನಿರ್ಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದರು.

ಮಂಗಳವಾರ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಉಡುಪಿಯ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ಪಥ ಸಂಚಲನ ನಡೆಸಿ, ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.

ಕೋಮು ಸಂಘರ್ಷಕ್ಕೆ ಕಾರಣವಾಗುವ ಜಾತಿ ಧರ್ಮ ಮೀರಿ ನಿಂತು, ಭಾರತೀಯರಾದ ನಾವೆಲ್ಲರೂಒಂದೇ ಎಂಬ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಿದೆ. ಹಾಗಾದಾಗ ಮಾತ್ರ ಭಾರತ ಸ್ವಾತಂತ್ರ್ಯದ 76 ವರ್ಷಗಳಕಾಲಘಟ್ಟದಲ್ಲಿ ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಎಲ್ಲಾ ಧಮೀರ್ಯರು ಸಹೋದರರಂತೆ ಸಾಮರಸ್ಯದ ಶಾಂತಿಯುತ ಬದುಕನ್ನು ಸಾಗಿಸಲು ನಾವುಪ್ರಯತ್ನಿಸಬೇಕು. ಶಾಂತಿ ನೆಮ್ಮದಿಗೆ ಭಂಗ ತರುವಂತಹ ಯಾವುದೇ ಕೆಟ್ಟ ಶಕ್ತಿಗಳನ್ನು, ಪ್ರಯತ್ನಗಳನ್ನುವಿಫಲಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸ್ವಾತಂತ್ರ$್ಯ ಹೋರಾಟದಲ್ಲಿ ಉಡುಪಿಯ ಸ್ಮರಣೆ
ಸ್ವಾತಂತ್ರ್ಯ ಹೋರಾಟದಲ್ಲಿ ಉಡುಪಿ ಜಿಲ್ಲೆಯ ಪಾತ್ರ ಅವಿಸ್ಮರಣೀಯ. ಅಜ್ಜರಕಾಡು ಸ್ವಾತಂತ್ರ್ಯಹೋರಾಟದ ಸಭೆಗಳಿಗೆ ಆಸರೆಯಾಗಿತ್ತು. ಮಹಾತ್ಮಾ ಗಾಂಧೀಜಿ ಅವರು ನಡೆಸಿದ ಸಭೆ ಪ್ರಜಾಪ್ರಭುತ್ವದ ಆಶಯವನ್ನು ಜಾಗೃತಗೊಳಿಸಿತು.ಆಂಗ್ಲರ ವಿರುದ್ಧ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆಯ ಹಲವು ಹೋರಾಟಗಾರರ ತ್ಯಾಗ, ನೆನಪಿಸಿಕೊಳ್ಳುವುದು ಅಗತ್ಯವಾಗಿದ್ದು, ಅವರಲ್ಲಿ ಎಸ್​.ಯು.ಪಣಿಯಾಡಿ, ಹಿರಿಯಡ್ಕ ರಾಮರಾಯ ಮಲ್ಯ, ಸಾಂತ್ಯಾರು, ಅನಂತಪದ್ಮನಾಭ ಭಟ್​, ಕುಬೇರ ಪಾಂಡುರಂಗ ರಾವ್​, ತೋನ್ಸೆ ಮುಕುಂದ ಪೈ, ಆರ್​.ಎಸ್​.ಶೆಣೈ, ಎಂ.ವಿಠಲ ಕಾಮತ್​, ಎ.ವಿ.ಬಾಳಿಗಾ, ಸತ್ಯಮಿತ್ರ ಬಂಗೇರಾ, ಹಾಜಿ ಅಬ್ದುಲ್ಲಾ ಸಾಹೇಬ್​ ಸೇರಿದಂತೆ ಮೊದಲಾದ ಹೋರಾಟಗಾರರನ್ನು ಸ್ಮರಿಸಬೇಕು. ಉಡುಪಿ ಜಿಲ್ಲೆ ಸ್ಥಾಪನೆಯಾಗಿ 25 ವರ್ಷ ಕಳೆದಿದೆ. ಜಿಲ್ಲೆಯ ರಮಣೀಯ ಪ್ರಕೃತಿ ಸೌಂದರ್ಯ, ನದಿಗಳು, ಕಡಲ ತೀರಗಳು, ಶಿಕ್ಷಣ ಸಂಸ್ಥೆ, ರಾಜ್ಯ, ದೇಶ ಹಾಗೂ ವಿದೇಶಗಳಿಂದಲೂ ಸಹ ಗುರುತಿಸಿಕೊಂಡಿದೆ. ಜಿಲ್ಲೆಯು ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಅಭಿವೃದ್ಧಿ ಕಂಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಕೂಡುಗೆಯೂ ಸಾಕಷ್ಟಿದೆ. ಮಹಾತ್ಮಾ ಗಾಂಧಿಜೀ ಅವರು1920, 1927, 1934 ರಲ್ಲಿ ಇಲ್ಲಿಗೆಭೇಟಿ ಕೊಟ್ಟಿದ್ದನ್ನ ಸ್ಮರಿಸಬಹುದು.1934 ರಲ್ಲಿ ಗಾಂಧಿಜೀ ಅವರು ಯಾತ್ರೆಯಲ್ಲಿ ಬರುತ್ತಿದ್ದಾಗ ಇಲ್ಲಿಯ ಜನರು, ವಿಶೇಷವಾಗಿ ಮಹಿಳೆಯರು ಬಂಗಾರದ ಆಭರಣಗಳನ್ನ ಸ್ವಾತಂತ್ರ್ಯ ಹೋರಾಟಕ್ಕಾಗಿ ಗಾಂಧಿಜೀ ಅವರಿಗೆ ನೀಡಿದ್ದಾರೆ. ಉಡುಪಿಯ ಮೈದಾನದಲ್ಲಿ ಗಾಂಧಿಜೀ ಅವರಿಗೆ ನಿರುಪಮ ಎಂಬ 6 ವರ್ಷದ ಪುಟ್ಟ ಬಾಲಕಿ ತನ್ನ ಬಂಗಾರದ ಸರವನ್ನ ನೀಡಿದ್ದ ಭಾವನಾತ್ಮಕ ಪ್ರಸಂಗವನ್ನ ಯಾರೂ ಮರೆಯಲು ಸಾಧ್ಯವಿಲ್ಲ ಎಂದರು.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್​ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗುತ್ತಿದೆ. ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿವಿಸ್ತೃತ ಯೋಜನೆಯನ್ನು ತಯಾರಿಸಲಾಗುವುದು. ಜಿಲ್ಲೆಯಲ್ಲಿ 2022&-23 ರಲ್ಲಿ 2063 ಕೋಟಿ ರೂ. ಮೌಲ್ಯದ 2,65,528 ಮೆಟ್ರಿಕ್​ ಟನ್​ ಮೀನು ಉತ್ಪಾದನೆ ಆಗಿದೆ. ರಾಜ್ಯದಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಮೀನುಗಾರಿಕೆ ಜಿಲ್ಲೆಯ ಪ್ರಮುಖ ಉದ್ಯಮವಾಗಿದ್ದು ಇದರ ಸರ್ವತೋಮುಖ ಅಭಿವೃಧ್ದಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಮೀನುಗಾರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 50,000 ರೂ. ಗಳಿಂದ 3 ಲಕ್ಷ ರೂ. ಗಳಿಗೆಹೆಚ್ಚಿಸಲಾಗಿದೆ. ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್​ ಮಿತಿಯನ್ನು1.5 ಲಕ್ಷ ಕಿಲೋ ಲೀಟರ್​ನಿಂದ 2 ಲಕ್ಷ ಕಿಲೋ ಲೀಟರ್​ವರೆಗೆ ಹೆಚ್ಚಿಸಲಾಗಿದೆ. ಇದರಿಂದಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ. ನೆರವು ಸಿಗಲಿದೆ. ಮೀನುಗಾರಿಕಾ ದೋಣಿಗಳಲ್ಲಿನಸೀಮೆಎಣ್ಣೆ ಇಂಜಿನ್​ಗಳನ್ನು ಪೆಟ್ರೋಲ್​ ಅಥವಾ ಡೀಸೆಲ್​ ಇಂಜಿನ್​ಗಳಾಗಿ ಬಲಾಯಿಸಲು ತಲಾ 50,000 ರೂ.ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 4,000 ಸೀಮೆಎಣ್ಣೆ ಇಂಜಿನ್​ಗಳ ಬದಲಾವಣೆಗೆ 20 ಕೋಟಿರೂ. ಸಹಾಯಧನ ಒದಗಿಸಲಾಗುತ್ತಿದೆ. ಹೆಚ್ಚಿನಬೇಡಿಕೆ ಇರುವ ಮೀನಿನ ಮರಿಗಳನ್ನ ಅಧಿಕ ಪ್ರಮಾಣದಲ್ಲಿ ಉತ್ಪಾದಿಸಲು ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಪಿಕ್​ ಅಪ್​ ವ್ಯಾನ್​ ಖರೀದಿಸಲು 7 ಲಕ್ಷ ರೂ. ವರೆಗಿನ ಸಾಲವನ್ನು ಶೇ 4 ರ ಬಡ್ಡಿ ದರದಲ್ಲಿ ನೀಡುವ ಪ್ರಸ್ತಾಪ ರೈತರಿಗೆ ನೆರವಾಗಲಿದೆ ಎಂದರು.

ಆಯುಷ್ಮಾನ್​ ಆರೋಗ್ಯ ಕರ್ನಾಟಕದ ಅಡಿ ಉಡುಪಿಯಲ್ಲಿ 5,14,238 ಮಂದಿ ನೊಂದಾವಣಿ ಮಾಡಿಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ 23,902 ಪ್ರಕರಣಗಳಲ್ಲಿ 14.13 ಕೋಟಿ ವೈದ್ಯಕಿಯ ವೆಚ್ಚ ಪಾವತಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಕೆ ಇಲ್ಲದ ಮನೆಗಳಿಗೆ ಕುಡಿಯುವ ನೀರು ಸೌಲಭ್ಯ ಒದಗಿಸಲು ಮನೆ ಮನೆಗೆ ನಳ ಸಂಪರ್ಕ ಯೋಜನೆಯಡಿ ಜಿಲ್ಲೆಯಲ್ಲಿ 2,47,190 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲು ಗುರಿ ಹೊಂದಿದ್ದು, ಈಗಾಗಲೇ 1,90,974 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯವನ್ನು ಕಲ್ಪಿಸಿದೆ. ಉಳಿದ ಮನೆಗಳಿಗೆ ಶೀಘ್ರವಾಗಿ ನಳ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಹೆಬ್ರಿ ತಾಲೂಕಿನ ಕೆರೆಬೆಟ್ಟು ಮತ್ತು ಶಿವಪುರ ಗ್ರಾಮಗಳಲ್ಲಿ 113.59 ಎಕ್ರೆ , ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 50.42 ಎಕ್ರೆ ಜಮೀನನ್ನು ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂ ಸ್ವಾಧಿನಪಡಿಸಕೊಳ್ಳಲಾಗಿದ್ದು, ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿ 100 ಎಕ್ರೆ, ಕಾಪು ತಾಲೂಕಿನ ಎಲ್ಲೂರು ಹಾಗೂ ಸಾಂತೂರು ಗ್ರಾಮದಲ್ಲಿ ಒಟ್ಟು 941.98 ಎಕ್ರೆ ಜಮೀನಿನ ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ಪ್ರದೇಶದಲ್ಲಿ ಶೀಘ್ರದಲ್ಲಿಯೇ ಹೊಸ ಕೈಗಾರಿಕ ಪ್ರದೇಶವನ್ನು ಸ್ಥಾಪಿಸಲಾಗುವುದು ಎಂದರು.

93.72 ಲಕ್ಷರೂ.ತುರ್ತು ಪರಿಹಾರ ವಿತರಣೆ
ಪ್ರಸ್ತುತ ಸಾಲಿನ ಮುಂಗಾರು ಮಳೆಯ ಅವಧಿಯಲ್ಲಿ ಉಂಟಾಗಿರುವ ಹಾನಿಗಳಿಗೆ ಎನ್​.ಡಿ.ಆರ್​.ಎಫ್​ ಹಾಗೂಎಸ್​.ಡಿ.ಆರ್​.ಎಫ್​ ಮಾರ್ಗಸೂಚಿಯಂತೆ ಒಟ್ಟು 93.72 ಲಕ್ಷ ರೂ.ತುರ್ತು ಪರಿಹಾರವನ್ನು ಪಾವತಿಸಲಾಗಿದೆ.ಹೆಚ್ಚುವರಿಯಾಗಿ ಮನೆ ಹಾನಿ ಪ್ರಕರಣಗಳಿಗೆ, ಮನೆಯನ್ನು ಹೊಸದಾಗಿ ನಿರ್ಮಿಸಲು 5 ಲಕ್ಷ ಹಾಗೂ ದುರಸ್ಥಿಮಾಡಿಕೊಳ್ಳಲು 3 ಲಕ್ಷ? ರೂಪರಿಹಾರವನ್ನು ನೀಡಲು ಮಂಜೂರಾತಿ ನೀಡಲಾಗಿದೆ. ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಯಡಿ ಒಟ್ಟು 1,46,897 ಪಿಂಚಣಿದಾರರಿಗೆ ಮಾಸಿಕ ಪಿಂಚಣಿನೀಡಲಾಗುತ್ತಿದೆ.

ಕೂಸಿನ ಮನೆ
ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯಹಣಕಾಸು ಸಂಸ್ಥೆಯ ಮೂಲಕ ಶೇ. 4 ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಕೋಟಿರೂ.ಗಳಿಂದ ಐದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಹಾಗೂ 6ರ್ವಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಠಿಕತೆ ಮತ್ತು ಸುರಕ್ಷತೆಗಾಗಿ ಕೂಸಿನ ಮನೆ ಎಂಬ ಹೆಸರಿನಲ್ಲಿ 4,000 ಗ್ರಾಮ ಪಂಚಾಯಿತಿಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಪ್ರಾರಂಭಿಸಲಾಗುವುದು ಎಂದರು.

ರಾಜ್ಯದಲ್ಲಿನ ಆಸಿಡ್​ ದಾಳಿ ಸಂತ್ರಸ್ಥರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸ್ವಯಂಉದ್ಯೋಗಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲು ಎರಡು ಕೋಟಿ ರೂ. ಅನುದಾನ ಮತ್ತು ರಾಜೀವ್​ ಗಾಂಧಿ ವಸತಿ ನಿಗಮದಮೂಲಕ ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಉದ್ಯಮ ಶಕ್ತಿ ಎಂಬ ಯೋಜನೆಯಡಿ 100 ಸ್ಥಳಗಳಲ್ಲಿ ಪೆಟ್ರೋಲ್​ ಬಂಕ್​ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸ್ವ-&ಸಹಾಯ ಸಂಘಗಳ ಮೂಲಕ ಸಂಪೂರ್ಣ ನಿರ್ವಹಣೆ ಮಾಡಲು ಕ್ರಮವಹಿಸಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್​ ವರಿಷ್ಠ್ಠಾಧಿಕಾರಿ ಅಕ್ಷಯ್​ ಎಂ. ಹಾಕೆ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಮೊದಲಾದವರು ಉಪಸ್ಥಿತರಿದ್ದರು. ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನೆಲೆಯಲ್ಲಿ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದ ಬಳಿಯಿರುವ ಹುತ್ಮಾತ್ಮರ ಸ್ಮಾರಕಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಭೇಟಿ ನೀಡಿ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net