

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ತಾಲೂಕಿನ ಬಾಳೇಕುಂದ್ರಿ ಕೆ.ಎಚ್.ಗ್ರಾಮದಲ್ಲಿ ಸಿಟಿ ಬಸ್ ಕಂಡಕ್ಟರ್, ಯುವತಿ ನಡುವಿನ ಭಾಷಾ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿಬಂಧಿಸಲಾಗಿದ್ದು, ಪರ-ವಿರೋಧ ಕೇಸ್ ದಾಖಲಾಗಿವೆ. ಸಮಗ್ರ ವರದಿ ಸಲ್ಲಿಕೆಗೆ ಮೂರು ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಬಾಳೇಕುಂದ್ರಿ ಕೆ.ಎಚ್.ಗ್ರಾಮಕ್ಕೆ ಹೋಗುವ ಸಿಟಿ ಬಸ್‌ನಲ್ಲಿ ಯುವತಿ ಯುವಕನಿಗೂ ಉಚಿತ ಟಿಕೆಟ್ ಪಡೆದುಕೊಂಡಿದ್ದಳು. ಯುವಕನ ಟಿಕೆಟ್‌ಗೆ ದುಡ್ಡು ಪಾವತಿಸು ಎಂದಿದ್ದಕ್ಕೆ ಕಂಡಕ್ಟರ್ ಮತ್ತು ಯುವತಿ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕನ್ನಡದಲ್ಲಿ ಮಾತನಾಡು ಎಂದು ಕಂಡಕ್ಟರ್, ಮರಾಠಿಯಲ್ಲೇ ಮಾತಾಡು ಎಂದು ಯುವತಿ ಪಟ್ಟು ಹಿಡಿದಿದ್ದಾಳೆ. ಇದೇ ವಿಷಯ ಭಾಷಾ ಸ್ವರೂಪ ಪಡೆದುಕೊಂಡು ಗಲಾಟೆ ನಡೆದು ಕಂಡಕ್ಟರ್ ಮೇಲೆ ಹಲ್ಲೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಲ್ಲೆ ನಡೆಸಿದವರ ಪೈಕಿ ನಾಲ್ವರನ್ನು ಬಂಧಿಸಿದ್ದೇವೆ. ಇನ್ನೂಳಿದ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತಪ್ಪಿತಸ್ಥರ ವಿರುದ್ಧ ಮೂಲಾಜಿಲ್ಲದೇ ಕ್ರಮ:ನಗರ, ಗ್ರಾಮೀಣ ಭಾಗದಲ್ಲಿ ಕನ್ನಡ ಮತ್ತು ಮರಾಠಿ ವಿಷಯದ ಕುರಿತಾಗಿ ಯಾವುದೇ ಗಲಾಟೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಳೇಕುಂದ್ರಿ ಕೆ.ಎಚ್., ಸುಳೇಭಾವಿ ಗ್ರಾಮದಲ್ಲಿ ಕೆಲವರನ್ನು ಕರೆದು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿಕೊಳ್ಳಲಾಗುತ್ತಿದೆ. ಕೆಲ ಸಂಘಟನೆಗಳ ಕಾರ್ಯಕರ್ತರು ಉದ್ದೇಶ ಪೂರಕವಾಗಿಯೇ ವಿಷಯ ದೊಡ್ಡದಾಗಿ ಬಿಂಬಿಸುವ ಕೆಲಸ ನಡೆಯುತ್ತಿವೆ. ಹಾಗಾಗಿ ಎರಡು ಭಾಷಿಕರು ಶಾಂತತೆ ಕಾಪಾಡಿಕೊಳ್ಳಬೇಕು ಎಂದು ವಿನಂತಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಯಾರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದರು.
ಪ್ರಕರಣ ಹಿಂಪಡೆಯಲು ಆಗ್ರಹ: ಕನ್ನಡ ವಿಷಯ ಪ್ರಕರಣ ಮುಚ್ಚಿ ಹಾಕುವ, ಕನ್ನಡಿಗರನ್ನು ಹೆದರಿಸುವ ಉದ್ದೇಶದಿಂದ ನಗರದ ಸಾರಿಗೆ ಬಸ್ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೆ ಪೋಕ್ಸೋ ಪ್ರಕರಣ ಹಾಕಲಾಗಿದೆ. ಮರಾಠಿ ಭಾಷಿಕರ ಓಲೈಕೆ ರಾಜಕಾರಣ, ಮತದ ಲಾಭಕ್ಕಾಗಿ ಕನ್ನಡಿಗರ ಮೇಲೆ ಕೇಸ್ ಹಾಕಾಲಾಗುತ್ತಿದೆ. ಇಂತಹ ಪ್ರವೃತ್ತಿ ಪೊಲೀಸರು, ರಾಜಕಾರಣಿಗಳು ಕೈಬಿಡಬೇಕು. ಪೋಕ್ಸೋ ಕೇಸ್ ಕೂಡಲೇ ಹಿಂಪಡೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು (ಕರವೇ) ಮಾರಿಹಾಳ ಪೊಲೀಸ್ ಠಾಣೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಆಶಾ ಸನದಿ ಇತರರಿದ್ದರು.
ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಕೆ.ಎಚ್.ಗ್ರಾಮದಲ್ಲಿ ಕಂಡಕ್ಟರ್ ಮೇಲೆ ನಡೆಸಿದವರ ಬಂಧನಕ್ಕೆ ಆಗ್ರಹಿಸಿ ಶನಿವಾರ ಬೆಳಗಾವಿ-ಬಾಗಲಕೋಟೆ ಹೆದ್ದಾರಿ ತಡೆದು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಹೆದ್ದಾರಿ ಬಂದ್ ಮಾಡಿದ್ದರಿಂದ ಎರಡು ಗಂಟೆಗಳ ಕಾಲ ಟ್ರಾಫಿಕ್ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಸಾರಿಗೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಗಡಿ ಭಾಗದ ಎಸ್‌ಪಿ ಜತೆ ನಾವು ಮಾತನಾಡಿದ್ದೇವೆ. ಅಲ್ಲದೆ, ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸುವ ಕುರಿತು ಚರ್ಚಿಸುತ್ತಿದ್ದೇವೆ. - ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಪೊಲೀಸ್ ಆಯುಕ್ತ