ಈದ್ ಮಿಲಾದ್ ಪ್ರಯುಕ್ತ ಭವ್ಯ ಮೆರವಣಿಗೆ

bkt-27-6
ಬಾಗಲಕೋಟೆ ನಗರದ ಅಂಜುಮನ್ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಸಂಸ್ಥೆ ಮತ್ತು ಸೀರತ್ ಕಮಿಟಿ ಕಾರ್ಯದರ್ಶಿ ಸಿಕಂದರ್ ಅಥಣಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನವನಗರ ಸೀರತ್ ಸಮಿತಿ ಅಧ್ಯಕ್ಷ ಅಮೀನಸಾಬ ರಕ್ಕಸಗಿ, ಬಾಗಲಕೋಟೆ ಸೀರತ್ ಸಮಿತಿ ಅಧ್ಯಕ್ಷ ಅಕ್ಬರಸಾಬ ಮುಲ್ಲಾ, ಉಪಾಧ್ಯಕ್ಷ ಅಯ್ಯೂಬಸಾಬ ಪುಣೇಕಾರ ಇತರರು ಇದ್ದರು.
Published on

ಬಾಗಲಕೋಟೆ: ಅಂಜುಮನ್ ಸಂಸ್ಥೆ ನೇತೃತ್ವದಲ್ಲಿ ಈದ್ ಮಿಲಾದ್ ಪ್ರಯುಕ್ತ ಸೆ.೨೮ರ ನವನಗರದಲ್ಲಿ ಹಾಗೂ ಅ.೧ರಂದು ಭಾನುವಾರ ಹಳೆ ನಗರದಲ್ಲಿ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಂಜುಮನ್ ಸಂಸ್ಥೆ ಮತ್ತು ಸೀರತ್ ಕಮಿಟಿ ಕಾರ್ಯದರ್ಶಿ ಸಿಕಂದರ್ ಅಥಣಿ ಹೇಳಿದರು.

ಹಜರತ್ ಮೊಹಮ್ಮದ ಮುಸ್ತಫಾ ಸ್ವಲ್ಲಲ್ಲಾಹು ಅಲಲೈಹಿವ ಸ್ವಲ್ಲಂ ಅವರ ಜನ್ಮದಿನವನ್ನು ಈದ್ ಮಿಲಾದ್ ಆಗಿ ಆಚರಿಸಲಾಗುತ್ತದೆ. ಅವರು ಕಂದಾಚಾರ, ಮೂಢನಂಬಿಕೆಯನ್ನು ದೂರಗೊಳಿಸಿದ ಮಹಾನ್ ಸಂತರು. ಅವರ ಜನ್ಮದಿನವನ್ನು ಇತರ ಧರ್ಮಿಯರು ಸ್ವಾಗತಿಸುವ ರೀತಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ನಗರದ ಅಂಜುಮನ್ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನವನಗರದ ಅಂಜುಮನ್ ಸಂಸ್ಥೆ ಆವರಣದಿಂದ ಸೆ.೨೮ರ ಮಧ್ಯಾಹ್ನ ೨ಕ್ಕೆ ಹಮ್ಮಿಕೊಂಡಿರುವ ಮೆರವಣಿಗೆಗೆ ಶಾಸಕ ಎಚ್.ವೈ.ಮೇಟಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಇಮಾಮಜಾಫ್ ಬೇಪಾರಿ ಅವರು ಚಾಲನೆ ನೀಡಲಿದ್ದು, ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ ಅಂಜುಮನ್ ಶಾದಿಮಹಲ್‌ನಲ್ಲಿ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

ಅ.೧ರಂದು ಹಳೆ ಬಾಗಲಕೋಟೆಯಲ್ಲಿರುವ ಅಂಜುಮನ್ ಸಂಸ್ಥೆಯಿಂದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಅಂದು ಮಧ್ಯಾಹ್ನ ೨ಕ್ಕೆ ನಡೆಯಲಿರುವ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ ಸಂಜೆ ಮುಕ್ತಾಯಗೊಳ್ಳಲಿದೆ. ನಗರದ ಎಲ್ಲ ಮಸೀದಿ ಪೇಶ ಇಮಾಮ ಹಾಗೂ ಎಲ್ಲ ಜಮಾತ್‌ನ ಮುಖ್ಯಸ್ಥರನ್ನು ಮೆರವಣಿಗೆಗೆ ಆಹ್ವಾನಿಸಲಾಗಿದೆ ಎಂದರು.

ನವನಗರ ಸೀರತ್ ಸಮಿತಿ ಅಧ್ಯಕ್ಷ ಅಮೀನಸಾಬ ರಕ್ಕಸಗಿ ಮಾತನಾಡಿ, ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದಾಗಿ ಮಕ್ಕಳಿಗೆ ಕುರಾನ್ ಪಠಣವೂ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಅ.೮ರಂದು ಹಮ್ಮಿಕೊಳ್ಳಲಾಗಿದೆ ಅಂದು ಸಭಾ ಕಾರ್ಯಕ್ರಮವೂ ಜರುಗಲಿದೆ. ಮೆರವಣಿಗೆಯಲ್ಲಿ ಸಮಾಜ ಬಾಂಧವರು ಸಮುದಾಯದ ಸಂಪ್ರದಾಯದ ಉಡುಗೆ, ತೊಡುಗೆಗಳನ್ನು ತೊಟ್ಟು ಭಾಗವಹಿಸಬೇಕು. ಮಹಾನ್ ಸಂತರ ಜನ್ಮದಿನವಾಗಿರುವುದರಿಂದ ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಘೋಷಣೆಗಳನ್ನು ಕೂಗುವುದು, ಅಸಭ್ಯವಾಗಿ ವರ್ತಿಸದಂತೆ ತಿಳಿಸಲಾಗಿದೆ. ಮೆರವಣಿಗೆಯಲ್ಲಿ ೫ ಸಾವಿರಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ. ಮುಂದಿನ ವರ್ಷದಿಂದ ಧ್ವನಿ ವರ್ಧಕ ಬಳಸದೆ ಮೆರವಣಿಗೆಯನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಬಾಗಲಕೋಟೆ ಸೀರತ್ ಸಮಿತಿ ಅಧ್ಯಕ್ಷ ಅಕ್ಬರಸಾಬ ಮುಲ್ಲಾ, ಉಪಾಧ್ಯಕ್ಷ ಅಯ್ಯೂಬಸಾಬ ಪುಣೇಕಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net