ಕರಗಿದ ಐಸ್‌ಕ್ರೀಮ್ ಉದ್ಯಮ

ice new
Published on

ಮಂಗಳೂರು: ಐಸ್‌ಕ್ರೀಂ ಉದ್ಯಮಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಈ ಬಾರಿ ದೊಡ್ಡ ಹೊಡೆತ ಬಿದ್ದಿದ್ದು, ಕರೊನಾ ವೈರಸ್‌ನಿಂದಾಗಿ ಐಸ್‌ಕ್ರೀಂ ಕರಗಿ ನೀರಾಗಿ ಬಿಟ್ಟಿದೆ.

ಮಾರ್ಚ್- ಏಪ್ರಿಲ್- ಮೇ ತಿಂಗಳು ಐಸ್‌ಕ್ರೀಂ ಉದ್ದಿಮೆಗಳಿಗೆ ಅತ್ಯಧಿಕ ವಹಿವಾಟಿನ ಸಮಯ. ಇಡೀ ವರ್ಷದ ಶೇ.40ರಷ್ಟು ವ್ಯವಹಾರ ಈ ಮೂರು ತಿಂಗಳಲ್ಲಿ ನಡೆಯುತ್ತದೆ. ಆದರೆ ಕರೊನಾ ಈ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದ ಆರಂಭದಲ್ಲೇ ದೊಡ್ಡ ಹೊಡೆತ ನೀಡಿದೆ. ಮೊದಲ ತ್ರೈಮಾಸಿಕದಲ್ಲಿ 13 ದಿನಗಳು ಕಳೆದಿದ್ದು, ಈ ವೇಳೆಗಾಗಲೇ ಹಲವು ಕೋಟಿ ರೂಪಾಯಿ ವ್ಯವಹಾರ ಕೈ ಬಿಟ್ಟು ಹೋಗಿದೆ. ದೊಡ್ಡ ಕಂಪನಿಗಳು ಇನ್ನೂ ತಮ್ಮ ವ್ಯವಹಾರದ ಖಾತೆಯನ್ನೇ ತೆರೆದಿಲ್ಲ. ಮುಂದಕ್ಕೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮಳೆಗಾಲ. ಹೀಗೆ ಸುಮಾರು 7 ತಿಂಗಳು ಯಾವುದೇ ವಹಿವಾಟಿಲ್ಲದೆ ಉದ್ಯಮ ಮುನ್ನಡೆಯಬೇಕಿದೆ. ಐಸ್‌ಕ್ರೀಂ ಸಂಸ್ಥೆಗಳ ಮಾಲೀಕರನ್ನು ಈ ಪರಿಸ್ಥಿತಿ ಆತಂಕಕ್ಕೀಡಾಗುವಂತೆ ಮಾಡಿದೆ.

ಕರ್ನಾಟಕದಲ್ಲಿ ಐಸ್‌ಕ್ರೀಂ ಉದ್ಯಮ ವಾರ್ಷಿಕ 700ರಿಂದ 1000 ಕೋಟಿ ರೂ.ವರೆಗೆ ವ್ಯವಹಾರ ನಡೆಸುತ್ತವೆ. ತಿಂಗಳಿಗೆ ಅಂದಾಜು 60-70 ಕೋಟಿ ರೂ. ವ್ಯವಹಾರ ನಡೆಯುತ್ತದೆ. ಆದರೆ ಇಂದಿನ ಪರಿಸ್ಥಿತಿ ಗಮನಿಸಿದರೆ 4 ಕೋಟಿ ರೂ. ವ್ಯವಹಾರ ನಡೆಯುವುದೂ ಕಷ್ಟ. ಕೆಲವು ಸಂಸ್ಥೆಗಳು ಹೋಮ್ ಡೆಲಿವರಿ ಸೇವೆ ನೀಡುವುದರಿಂದ ಇಷ್ಟು ವ್ಯವಹಾರವಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಿಸಿ, ಮಾರಾಟಕ್ಕೆ ಸಿದ್ಧಪಡಿಸಿ ಇಡಲಾಗಿರುವ ಕೋಟ್ಯಂತರ ರೂ. ಮೌಲ್ಯದ ಉತ್ಪನ್ನಗಳು ಆಯಾ ಸಂಸ್ಥೆಗಳ ಕೋಲ್ಡ್ ಸ್ಟೋರೇಜ್‌ಗಳಲ್ಲಿ ದಾಸ್ತಾನಿವೆ. ಮಾರಾಟ ಅವಧಿಗೆ ಮೊದಲು ಅವು ಗ್ರಾಹಕರಿಗೆ ತಲುಪದಿದ್ದರೆ ವ್ಯರ್ಥ. ವ್ಯವಹಾರವಿಲ್ಲದೆ ಕೋಲ್ಡ್ ಸ್ಟೋರೇಜ್‌ಗಳಿಗೆ ತಗಲುವ ವಿದ್ಯುತ್ ಬಿಲ್ ಕೂಡ ಸಂಸ್ಥೆಗೆ ಮತ್ತೊಂದು ದೊಡ್ಡ ಹೊಡೆತ.

ಗಾಯದ ಮೇಲೆ ಬರೆ

ಐಸ್‌ಕ್ರೀಂ ತಯಾರಿಯಲ್ಲಿ ಪ್ರಮುಖವಾಗಿರುವ ಕೆನೆ ರಹಿತ ಹಾಲಿನ ಪುಡಿ (ಸ್ಕಿಮ್ಡ್ ಮಿಲ್ಕ್ ಪೌಡರ್) ದರ ಏರಿಕೆ ಮತ್ತು ಲಭ್ಯತಾ ಪ್ರಮಾಣ ಕಡಿಮೆಯಾಗಿ, ಹೊರದೇಶದಿಂದ ಆಮದು ಮಾಡಲು ಶೇ.60ರಷ್ಟು ತೆರಿಗೆ, ಐಸ್‌ಕ್ರೀಂ ಮೇಲೆ ಶೇ.18 ಜಿಎಸ್‌ಟಿ ಇವೆಲ್ಲದರಿಂದ ಉದ್ಯಮದ ಮಾಲೀಕರು ಹೈರಾಣಾಗಿ ಹೋಗಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿರುವ ಉದ್ಯಮದ ಮೇಲೆ ಕರೊನಾ ಕರಿನೆರಳು ಕೂಡಾ ಬಿದ್ದಿದ್ದು, ಉದ್ದಿಮೆ ಮತ್ತಷ್ಟು ತತ್ತರಿಸುವಂತಾಗಿದೆ. ಹಲವು ಘಟಕಗಳು ಬಾಗಿಲು ಮುಚ್ಚಿದರೆ ಅಶ್ಚರ್ಯವಿಲ್ಲ.

ಐಸ್‌ಕ್ರೀಂ- ಕರೊನಾಗೆ ಸಂಬಂಧವಿಲ್ಲ ಐಸ್‌ಕ್ರೀಂನಿಂದಾಗಿ ಕರೊನಾ ಹರಡುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷಾೃಧಾರವಿಲ್ಲ. ಅಂತಹ ಸುಳ್ಳು ಸುದ್ದಿಗಳಿಗೆ ಜನರು ಕಿವಿಕೊಡಬಾರದು. ಯುನಿಸೆಫ್ ಕೂಡಾ ಈ ಕುರಿತ ತನ್ನ ಅಭಿಪ್ರಾಯ ತಿಳಿಸಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ ಮಾತ್ರ ಕರೊನಾ ಹರಡುತ್ತದೆ ಎಂದು ಭಾರತೀಯ ಐಸ್‌ಕ್ರೀಂ ತಯಾರಕರ ಅಸೋಸಿಯೇಶನ್ ತಿಳಿಸಿದೆ.

ಕರೊನಾ ಲಾಕ್‌ಡೌನ್ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಐಸ್‌ಕ್ರೀಂ ಅವಶ್ಯ ವಸ್ತುಗಳಡಿ ಬಾರದಿರುವ ಹಿನ್ನೆಲೆಯಲ್ಲಿ ಒಟ್ಟು ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವರ್ಷದ ಶೇ.40ರಷ್ಟು ವ್ಯವಹಾರ ಈ ಮೂರು ತಿಂಗಳಲ್ಲಿ ನಡೆಯುವುದರಿಂದ ಇದೊಂದು ತುಂಬಲು ಸಾಧ್ಯವಾಗದ ನಷ್ಟ. ಈ ಕುರಿತು ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. - ಪ್ರದೀಪ್ ಪೈ, ಐಐಸಿಎಂಎ ಆಡಳಿತ ಸಮಿತಿ ಸದಸ್ಯ, ಹಾಂಗ್ಯೊ ಐಸ್‌ಕ್ರೀಂ ಸಂಸ್ಥೆ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net