ಐಸಿಸಿ ಸಭೆ ಅವೈಜ್ಞಾನಿಕ ತೀರ್ಮಾನ ಕೈಬಿಡಲಿ

Ark former
ರಾಮನಗೌಡ
Published on

ಅರಕೇರಾ: ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.23 ರತನಕ ರೈತರ ಜಮೀನುಗಳಿಗೆ ನೀರು ಹರಿಸಲು ಅಧಿಕಾರಿಗಳು ಕೈಗೊಂಡಿರುವ ನಿರ್ಣಯ ಅವೈಜ್ಞಾನಿಕವಾಗಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮನಗೌಡ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾರಾಯಣಪುರ ಬಲ ಮತ್ತು ಎಡದಂಡೆ ನಾಲೆ, ರಾಂಪುರ ಏತ ನೀರಾವರಿ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸುವಲ್ಲಿ ಸಲಹಾ ಸಮಿತಿ ತೀರ್ಮಾನ ರೈತ ವಿರೋಧಿಯಾಗಿದೆ. ಹಿಂಗಾರು ಬಿತ್ತನೆ ವಿಳಂಬವಾಗಿದ್ದರಿಂದ ಭತ್ತ, ಮೆಣಸಿನಕಾಯಿ, ಶೇಂಗಾ, ಸಜ್ಜೆ ಬೆಳೆಗಳಿಗೆ ಕೊನೇ ಕ್ಷಣದಲ್ಲಿ ನೀರಿನ ಕೊರತೆಯಾಗಲಿದೆ. ಈಗಾಗಲೇ ಜಲಾಶಯದಲ್ಲಿ ಸಮೃದ್ಧ ನೀರು ಇದ್ದರೂ, ನಾಲೆಗಳಿಗೆ ಹರಿಸಲು ತೆಗೆದುಕೊಂಡ ನಿರ್ಣಯ ಸರಿಯಾಗಿಲ್ಲ ಎಂದರು.

ನೀರಾವರಿ ಸಲಹಾ ಸಮಿತಿ ನಿರ್ಧಾರದ ಪ್ರಕಾರ ನೀರು ಹರಿಸುವುದು ಕಡಿತ ಮಾಡಿದರೆ, ದೇವದುರ್ಗ ಮತ್ತು ಅರಕೇರಾ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ಎಕರೆ ಬೆಳೆ ನಷ್ಟವಾಗಲಿದೆ. ರೈತರು ಸಾಲ ಮಾಡಿ ಬೆಳೆದ ಬೆಳೆ ಕೈಗೆ ಸೇರುವಷ್ಟರಲ್ಲಿ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಈ ಬಗ್ಗೆ ದನಿ ಎತ್ತಬೇಕಾದ ಈ ಭಾಗದ ಜನಪ್ರತಿನಿಧಿಗಳು, ಸಚಿವರು ಮೌನ ತಾಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಏ.15ರವರೆಗೆ ವಾರಬಂದಿಯಂತೆ ನೀರು ಹರಿಸಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಚಿದಾನಂದ, ಶರಬಣ್ಣ ಸಾಹುಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net