ಐಸಿಸಿ ಸಭೆಯಲ್ಲಿ ಏಕಪಕ್ಷೀಯ ತೀರ್ಮಾನ ?

16 DVD 03
ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ ಶನಿವಾರ ನಡೆಯಿತು. ಐಸಿಸಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ, ಸಚಿವ ಶರಣಪ್ರಕಾಶ ಪಾಟೀಲ್, ಶಾಸಕರಾದ ಮಾನಪ್ಪ ವಜ್ಜಲ್, ಬಸನಗೌಡ ದದ್ದಲ್ ಇತರರಿದ್ದರು.
Published on

ದೇವದುರ್ಗ: ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ಜಮೀನಿಗೆ ಬೇಸಿಗೆ ಬೆಳೆಗೆ ನೀರು ಹರಿಸುವ ಸಂಬಂಧ ಆಲಮಟ್ಟಿಯಲ್ಲಿ ಆಯೋಜಿಸಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶನಿವಾರ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ. ಐಸಿಸಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳು ಹೇಳಿದ ಮಾತೇ ಫೈನಲ್ ಆಗಿದೆ.

ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದ ನೀರಿನ ಪ್ರಮಾಣ ನೋಡಿಕೊಂಡು ವಿವಿಧ ಉದ್ದೇಶಕ್ಕಾಗಿ 40ಟಿಎಂಸಿ ಅಡಿ ನೀರನ್ನು ಕಾಯ್ದಿರಿಸಲಾಗಿದೆ. 65 ಟಿಎಂಸಿ ಅಡಿ ನೀರು ಕೃಷಿ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಆ ಪ್ರಕಾರ ನಿತ್ಯ ಸುಮಾರು ಒಂದು ಟಿಎಂಸಿ ಅಡಿಯಂತೆ ಡಿ.9ರಿಂದ 2025ರ ಮಾ.23ರವರೆಗೆ ಎರಡನೇ ಬೆಳೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.

ಬೇಸಿಗೆ ಬೆಳೆ ಭತ್ತದ ಲೆಕ್ಕಾಚಾರ ಪ್ರಕಾರ 120ದಿನ ನೀರು ಹರಿಸುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 14ದಿನ ಚಾಲು ಹಾಗೂ 10ದಿನ ಬಂದ್ ಲೆಕ್ಕದಂತೆ ವಾರಬಂಧಿ ಹಾಕುವ ಬಗ್ಗೆ ತೀರ್ಮಾನಿಸಲಾಗಿದೆ. 120ದಿನಗಳಲ್ಲಿ 70ದಿನ ನಾಲೆಗೆನೀರು ಹರಿಸಿದರೆ 50ದಿನ ಬಂದ್ ಮಾಡುವ ನಿರ್ಧಾರವಾಗಿದೆ. ಕುಡಿವ ನೀರು, ಕೈಗಾರಿಕೆಗಳ ಬಳಕೆ, ಆವಿ, ಡೆಡ್ ಸ್ಟೋರೇಜ್, ನದಿ ಜತೆಗೆ ಆರ್‌ಟಿಪಿಎಸ್‌ಗೆ ಹರಿಸಲು ಸುಮಾರು 38ಟಿಎಂಸಿ ನೀರು ಅಗತ್ಯವಿದ್ದು ಹೀಗಾಗಿ 44ಟಿಎಂಸಿ ಅಡಿ ನೀರು ಕಾಯ್ದಿರಿಸಲಾಗಿದೆ.

ವಾರಬಂಧಿ ಪದ್ಧತಿಯನ್ನು 10ದಿನದ ಬದಲಿಗೆ 7ಇಲ್ಲವೆ 8ದಿನಕ್ಕೆ ಇಳಿಸಲು ರೈತ ಸಂಘಗಳು ಆಗ್ರಹಿಸಿದ್ದವು. ಇದಕ್ಕೆ ಐಸಿಸಿ ಸಭೆ ಸೊಪ್ಪು ಹಾಕಿಲ್ಲ. 10ದಿನ ವಾರಬಂಧಿ ಹಾಕಿದರೆ ಮೆಣಸಿನಕಾಯಿ, ಹತ್ತಿ, ತೊಗರಿ ಬೆಳೆಗೆ ಸಮಸ್ಯೆಯಾಗಲಿದೆ. ಅಲ್ಲದೆ ಬಲದಂಡೆ ಮುಖ್ಯನಾಲೆ ಆಧುನೀಕರಣ ಹಾಗೂ ಉಪಕಾಲುವೆ ನವೀಕರಣ ಕಾಮಗಾರಿ ಅರೆಬರೆ ಹಾಗೂ ಕಳೆಪಯಾಗಿ ಮಾಡಲಾಗಿದೆ. ಇದರಿಂದ ನೀರು ಹೆಚ್ಚಾಗಿ ಪೋಲಾಗಲಿದ್ದು ಟೇಲೆಂಡ್ ಭಾಗಕ್ಕೆ ಸಮರ್ಪಕವಾಗಿ ತಲುಪುವುದಿಲ್ಲ. ಹೀಗಾಗಿ ವಾರಬಂಧಿ ಇಳಿಸಲು ರೈತರು ಆಗ್ರಹಿಸಿದ್ದರು. ಕೆಲ ಶಾಸಕರು ಸಭೆಯಲ್ಲಿ ವಾರಬಂಧಿ ಬಗ್ಗೆ ಮಾತನಾಡಿದರೂ ಅಧಿಕಾರಿಗಳು ಅದಕ್ಯಾವುದಕ್ಕೂ ಕ್ಯಾರೇ ಎಂದಿಲ್ಲ ಎನ್ನಲಾಗಿದೆ.

ನ.16ರಿಂದ ನಾಲೆಗೆ 6ದಿನ ಬಂದ್‌ಮಾಡಿ ಭತ್ತ ಹೊರತುಪಡಿಸಿ ಉಳಿದ ಬೆಳೆಗೆ 8ದಿನ ನೀರು ಹರಿಸಲಾಗುವುದು. ನಂತರ 6ದಿನ ನೀರು ಬಂದ್ ಮಾಡಿ ಡಿ.9ರಿಂದ ವಾರಬಂಧಿ ಪ್ರಕಾರ 14:10ರ ಅನುಪಾತದಲ್ಲಿ ನೀರು ಹರಿಸಲು ತೀರ್ಮಾನಕೈಗೊಳ್ಳಲಾಗಿದೆ. ನೀರು ಉಳಿದರೆ 2025 ಮಾ.23 ನಂತರ ಒಂದುವಾರ ಬಂದ್ ಮಾಡಿ 8ದಿನ ನೀರು ಹರಿಸಲು ಐಸಿಸಿ ಸಭೆ ತೀರ್ಮಾನ ಕೈಗೊಂಡಿದೆ.

ರೈತರಿಗೆ ಕೊನೇ ಭಾಗದವರೆಗೆ ನೀರು ತಲುಪಿಸುವ ದೃಷ್ಟಿಯಿಂದ ವೈಜ್ಞಾನಿಕ ತೀರ್ಮಾನ ಕೈಗೊಂಡಿದ್ದು 14ದಿನಚಾಲು 10ದಿನಬಂದ್ ಪದ್ಧತಿ ಅನುರಿಸಲಾಗುವುದು. ಬೇಸಿಗೆ ಬೆಳೆಗೆ ಡಿ.9ರಿಂದ ಮಾರ್ಚ್ 23ರವರೆಗೆ 65ಟಿಎಂಸಿ ಅಡಿನೀರು ಹರಿಸಲಾಗುವುದು. ಈಗ ನ.16ರಿಂದ 6 ದಿನ ಬಂದ್ ಮಾಡಿ 8ದಿನ ಪರ್ಯಾಯ ಬೆಳೆಗೆ ಹರಿಸಲಾಗುವುದು. ಯಥಾಪ್ರಕಾರ ಡಿ.9ರಿಂದ ವಾರಬಂಧಿ ಪ್ರಕಾರ ನೀರು ಹರಿಸುತ್ತೇವೆ. ಪ್ರೇಮ್‌ಸಿಂಗ್ ಚೀಪ್ ಇಂಜಿನಿಯರ್, ಕೆಬಿಜೆಎನ್‌ಎಲ್, ಬಿ.ಗುಡಿ ವಲಯ 10ದಿನ ವಾರಬಂಧಿ ಹಾಕಿರುವುದು ಅವೈಜ್ಞಾನಿಕ ಹಾಗೂ ಐಸಿಸಿ ಸಭೆಯ ಏಕಪಕ್ಷೀಯ ನಿರ್ಧಾರ. ಕಳಪೆ ಕಾಮಗಾರಿಯಿಂದ ನಾಲೆ ಹಾಳಾಗಿವೆ. 10ದಿನ ವಾರಬಂಧಿ ಹಾಕಿದರೆ ಟೇಲೆಂಡ್‌ಗೆ ತಲುಪಲು 14-15ದಿನಬೇಕು. ಏ.10ವರೆಗೆ ಹರಿಸುವ ನೀರು ಹರಿಸುವ ಬದಲು ಮಾ.23ವರೆಗೆ ಮಾತ್ರ ಹರಿಸುತ್ತೇವೆ ಎಂದಿದ್ದಾರೆ. ಇದು ರೈತ ವಿರೋಧಿ ಸಭೆಯಾಗಿದ್ದು ಕೃಷಿಕರ ಸಭೆ ಕರೆದು ಹೋರಾಟದ ನಿರ್ಧಾರ ಮಾಡುತ್ತೇವೆ. ಪ್ರಭಾಕರ್ ಪಾಟೀಲ್ ಇಂಗಳದಾಳ ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net