ಡಿ.13ರಿಂದ ಜಿಕೆವಿಕೆಯಲ್ಲಿ ಐಸಿಎಆರ್ ದಕ್ಷಿಣ ವಲಯ ಕ್ರೀಡಾಕೂಟ

Vijayavani-logo
Published on

ಬೆಂಗಳೂರು: ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ (ಐಸಿಎಆರ್) ದಕ್ಷಿಣ ವಲಯ ಸಂಸ್ಥೆಗಳ ಉದ್ಯೋಗಿಗಳಿಗಾಗಿ ಕ್ರೀಡಾಕೂಟವು ಬುಧವಾರದಿಂದ ನಾಲ್ಕು ದಿನ ಬೆಂಗಳೂರು ಕೃಷಿ ವಿವಿ ಕ್ಯಾಂಪಸ್ ಜಿಕೆವಿಕೆಯಲ್ಲಿ ನಡೆಯಲಿದೆ.

ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಗೋವಾ ಹಾಗೂ ಐಸಿಎಆರ್‌ನ ಕೇಂದ್ರ ಕಚೇರಿ ಸಹಿತ 24 ಸಂಸ್ಥೆಗಳಿಗೆ ಸೇರಿದ 700ಕ್ಕೂ ಹೆಚ್ಚು ಕ್ರೀಡಾಳುಗಳು ಪಂದ್ಯಾಟದಲ್ಲಿ ಭಾಗಿಯಾಗಲಿದ್ದಾರೆ. ಈ ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಕೇರಂ, ಚೆಸ್ ಹಾಗೂ ಅಥ್ಲೆಟಿಕ್ಸ್ ಪಂದ್ಯಗಳು ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ನಡೆಯಲಿವೆ.

ಪಂದ್ಯಾವಳಿಯನ್ನು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಅವರು ಉದ್ಘಾಟಿಸಲಿದ್ದಾರೆ. ಐಐಎಚ್‌ಆರ್ ಹೆಸರಘಟ್ಟ ಕೇಂದ್ರದ ನಿರ್ದೇಶಕ ಪ್ರೊ. ಸಂಜಯ್ ಕುಮಾರ್ ಸಿಂಗ್ ಹಾಗೂ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕ್ರೀಡಾಕೂಟದ ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net