ಸಣ್ಣ ಕೈಗಾರಿಕೆಗಳೇ ಆರ್ಥಿಕತೆ ಬೆನ್ನೆಲಬು,  ಐಸಿಎಐ ಎಂಎಸ್ಎಂಇ ಮಹೋತ್ಸವದಲ್ಲಿ ಅಭಿಮತ

IMG_20250628_211040_402.jpg
Published on

ಹುಬ್ಬಳ್ಳಿ: ನಗರದ ಐಸಿಎಐ ಭವನದಲ್ಲಿ ಇಂಡಿಯನ್ ಚಾರ್ಟರ್ಡ ಅಕೌಂಟಂಟ್ಸ್ ಇನ್ ಸ್ಟಿಟ್ಯೂಟ್ (ಐಸಿಎಐ) ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ (ಎಸ್ಐಆರ್ ಸಿ) ಹುಬ್ಬಳ್ಳಿ ಶಾಖೆ ವತಿಯಿಂದ ಸಿಎ ಸಪೋರ್ಟ್-ಮೂಲಕ ನಿಮ್ಮ ವ್ಯವಹಾರ ಬೆಳೆಸಿ ಎಂಬ ಶೀರ್ಷಿಕೆಯಡಿ ಐಸಿಎಐ ಎಂಎಸ್ಎಂಇ ಮಹೋತ್ಸವವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.

ಐಸಿಎಐ ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ ಸಮಿತಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಎಎಂಪಿ ಇಂಡಸ್ಟ್ರಿ ಮತ್ತು ಜೈನ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ (ಜಿತೋ) ಯುವ ವಿಭಾಗ ಇವುಗಳ ಸಂಯುಕ್ತ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಎಸ್ಎಂಇ ಕ್ಷೇತ್ರದ ಬೆಳವಣಿಗೆ ಅಥವಾ ಉದ್ಯಮ ಆರಂಭಿಸಲು ನೆರವಾಗುವಲ್ಲಿ ಮತ್ತು ಅಭಿವೃದ್ಧಿಯಲ್ಲಿ ಚಾರ್ಟರ್ಡ ಅಕೌಂಟೆಂಟ್ ಗಳ ಪಾತ್ರವನ್ನು ಪ್ರಮುಖವಾಗಿ ಚರ್ಚಿಸಲಾಯಿತು.

ವಿಭವ ಗ್ರೂಪ್ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎನ್. ನಂದಕುಮಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಕ್ರೋ, ಸ್ಮಾಲ್ ಮತ್ತು ಮಿಡಿಯಂ ಎಂಟರ್ ಪ್ರೈಸಸ್ (ಎಂಎಸ್ಎಂಇ) ಕ್ಷೇತ್ರವು ಭಾರತೀಯ ಅರ್ಥವ್ಯವಸ್ಥೆಯ ನಿಜವಾದ ಚಾಲಕ ಶಕ್ತಿಯಾಗಿದೆ. ಉದ್ಯೋಗ ಸೃಷ್ಟಿ, ನಾವೀನ್ಯತೆ, ಕೈಗಾರಿಕಾ ಉತ್ಪಾದನೆ ಮತ್ತು ರಫ್ತುಗಳಲ್ಲಿ ಈ ಕ್ಷೇತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ರಾಜ್ಯದಲ್ಲಿ ಎಂಎಸ್ಎಂಇ ಗಳು ಕೇವಲ ವ್ಯವಹಾರವಲ್ಲ ಅವು ಜೀವನೋಪಾಯ ಸೃಷ್ಟಿಸುವ ತಾಣಗಳು, ಕೌಶಲ ಅಭಿವೃದ್ಧಿಕಾರರು ಹಾಗೂ ಆರ್ಥಿಕ ಸ್ಥಿರತೆಗೆ ಮೌಲ್ಯಯುತ ಆಧಾರಗಳಾಗಿವೆ ಎಂದು ಹೇಳಿದರು.

ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಅಕ್ಷಯ ಬಾಗರೇಚಾ, ನಿರವ ಮೋಮಾಯಾ ಅವರನ್ನು ಸನ್ಮಾನಿಸಲಾಯಿತು.

ಎಂಎಸ್ಎಂಇ ಸಂಸ್ಥೆಯ ಸಹಾಯಕ ನಿರ್ದೇಶಕ ಮೊಹಮ್ಮದ್ ಅರ್ಶಾದ್, ಕೆಎಸ್ಎಫ್ ಸಿಯ ಸುನಿಲ್ ಕುಲಕರ್ಣಿ, ಸಿಎ ಚಿರಾಗ ಕಟಾರಿಯಾ, ಸಿಎ ಕಪೀಲ್ ಭಂಡಾರ್ಕರ್ ಅವರು ವಿವಿಧ ವಿಷಯಗಳ ಮೇಲೆ ಮಾತನಾಡಿದರು.

ಸಿಎ ಅಕ್ಷಯಕುಮಾರ ಸಿಂಘಿ ಸ್ವಾಗತಿಸಿದರು. ಸಿಎ ಅನಂತ ನ್ಯಾಮಣ್ಣವರ ನಿರೂಪಿಸಿದರು. ವಿರುಪಾಕ್ಷ ಹಿಪ್ಪರಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net