

ಬೆಂಗಳೂರು: ನವೋದ್ಯಮಗಳಿಗೆ ಉತ್ತೇಜನ ನೀಡುವುದು ಹಾಗೂ ಹೊಸದಾಗಿ ನವೋದ್ಯಮ ಆರಂಭಿಸುವವರಿಗಾಗಿ ಭಾರತೀಯ ಲೆಕ್ಕಪರಿಸೋಧಕರ ಸಂಸ್ಥೆ (ಐಸಿಎಐ) ಬೆಂಗಳೂರಿನಲ್ಲಿ ಜೂ.27ರಿಂದ 29ರವರೆಗೆ ‘ಸ್ಟಾರ್ಟಪ್ ಸಮಾವೇಶ - 2024’ ಆಯೋಜಿಸಿದೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಸಿಎ ರಂಜೀತ್ ಕುಮಾರ್ ಅಗರವಾಲ್ ಈ ವಿಷಯ ತಿಳಿಸಿದರು. ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯ, ನವೋದ್ಯಮ ಸಮಿತಿ ಜಂಟಿಯಾಗಿ ಅಂತಾರಾಷ್ಟೀಯ ವಾಣಿಜ್ಯ ಸೇವೆ ಹಾಗೂ ವಿಶ್ವ ವಾಣಿಜ್ಯ ಸಂಘಟನೆಯ ನಿರ್ದೇಶನಾಲಯ ಸಹಯೋಗದೊಂದಿಗೆ ‘ಐಸಿಎಐ ಸ್ಟಾರ್ಟಪ್ ಸ್ಪಿಯರ್ -2024’ಅನ್ನು 3 ದಿನಗಳ ಕಾಲ ಬೆಂಗಳೂರಿನಲ್ಲಿ ಸಂಘಟಿಸಲಾಗಿದೆ. ಕರ್ನಾಟಕ ವ್ಯಾಪಾರ ಉತ್ತೇಜನ ಸಂಸ್ಥೆ (ಕೆಟಿಪಿಒ) ಕೂಡ ನೆರವಾಗುತ್ತಿದೆ ಎಂದರು.
ಮೂರು ದಿನಗಳ ಸಮಾವೇಶದಲ್ಲಿ ನವೋದ್ಯಮಗಳನ್ನು ಈಗಾಗಲೆ ಆರಂಭಿಸಿದವರು ಹಾಗೂ ಹೊಸದಾಗಿ ಆರಂಭಿಸುವವರಿಗೆ ಕಾರ್ಯಗಾರ, ವಿಚಾರ ಸಂಕಿರಣ, ಅನುಭವ ಹಾಗೂ ಜ್ಞಾನದ ವಿನಿಮಯ, ಕೌಶಲ ಅಭಿವೃದ್ದಿ ಮತ್ತು ಉದ್ಯಮ ಆರಂಭಿಸಲು ಬೇಕಾದ ಪೂರ್ವತಯಾರಿ ಕುರಿತು ಪೂರ್ಣ ಮಾಹಿತಿ ನೀಡಲಾಗುವುದು. 200ಕ್ಕೂ ಅಧಿಕ ನವೋದ್ಯಮಗಳು ಹಾಗೂ 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು 200 ದಶಲಕ್ಷಕ್ಕೂ ಅಧಿಕ ಬಂಡವಾಳ ನವೋದ್ಯಮಗಳಿಗೆ ಹರಿದುಬರುವ ಸಾಧ್ಯತೆ ಇದೆ ಎಂದು ರಂಜಿತ್‌ಕುಮಾರ್ ತಿಳಿಸಿದರು.