

ರಾಜು ಹೊಸಮನಿ ನರಗುಂದ
ಬಡತನ ಸಾಧನೆಗೆ ಅಡ್ಡಿಯಾಗದು ಎಂಬುದಕ್ಕೆ ತಾಲೂಕಿನ ಹದಲಿಯ ಇಬ್ರಾಹಿಂ ರೇವಡಿಗಾರ ಸಾಕ್ಷಿಯಾಗಿದ್ದಾರೆ. ಕುಟುಂಬ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ ಛಲದಿಂದ ಓದಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪುತ್ರನ ಸಾಧನೆಗೆ ಹೆತ್ತವರಿಗೆ ಬಹಳಷ್ಟು ಸಂತಸ ತಂದಿದೆ.
ಹೊಲವಿಲ್ಲದ ಕುಟುಂಬ, ಚಿಕ್ಕ ಮನೆಯಲ್ಲಿ ವಾಸ. ಇಂಥ ಕಡುಬಡತದಲ್ಲಿಯೇ ಇಬ್ರಾಹಿಂ ಎಂಬ ಪ್ರತಿಭೆ ಅರಳಿದೆ. ಇಬ್ರಾಹಿಂ ಅವರ ತಾಯಿ ಶೈನಾಜ್‌ಬಿ ರೇವಡಿಗಾರಗೆ ಅಡುಗೆ ಸಹಾಯಕಿ, ತಂದೆ ನದಾಫ್‌ಸಾಬ್ ಕೂಲಿ ಮಾಡುತ್ತಾರೆ.
ಮೂರು ವರ್ಷದ ಹಿಂದೆ ಇಬ್ರಾಹಿಂ ರೇವಡಿಗಾರ ಪಿಎಸ್‌ಐ ಪರೀಕ್ಷೆ ಬರೆದಾಗ 37ನೇ ರ‌್ಯಾಂಕ್ ಪಡೆದಿದ್ದರು. ಆದರೆ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂದು ಪರೀಕ್ಷೆ ರದ್ದಾಗಿತ್ತು. ಮುಂದೆ ಮತ್ತೊಂದು ಪರೀಕ್ಷೆಯನ್ನು ಸರ್ಕಾರ ನಡೆಸಿತು. ಆಗಲೂ ಇಬ್ರಾಹಿಂ ಉತ್ತೀರ್ಣಗೊಂಡು ಪಿಎಸ್‌ಐ ಆಗಿದ್ದಾರೆ. ದೈಹಿಕ ಸದೃಢತೆಯ ಪರೀಕ್ಷೆಯ ನಂತರ ಹೈದರಾಬಾದ್‌ನಲ್ಲಿ ಪಿಎಸ್‌ಐ ಕೋಚಿಂಗ್ ಪಡೆದಿದ್ದು ಯಶಸ್ಸಿಗೆ ನೆರವಾಗಿದೆ. ಕಳೆದ ಜ.7ರಂದು ನೇಮಕಾತಿ ಆದೇಶ ಬಂದಿತು. ಮಂಗಳೂರಿನಲ್ಲಿ ಪಿಎಸ್‌ಐ ಆಗಿ 22 ದಿನ ಮೊದಲು ಸೇವೆ ಸಲ್ಲಿಸಿದರು. ಸದ್ಯ ಮೈಸೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಅಡುಗೆ ಎಣ್ಣೆ ಮಾರಾಟ: 1ರಿಂದ 10ರವರೆಗೆ ಹದ್ಲಿಯಲ್ಲಿ ಮತ್ತು ಪಿಯುಸಿ ನರಗುಂದ ಕಾಲೇಜಿನಲ್ಲಿ, ಬಿಎಸ್‌ಸಿ ಅಗ್ರಿ ಧಾರವಾಡ ವಿವಿಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಇಬ್ರಾಹಿಂ ಅವರ ತಾಯಿಗೆ ಅಂಗನವಾಡಿ ಕೆಲಸದಿಂದ ಬರುವ ಸಂಬಳ ಅಷ್ಟಕಷ್ಟೇ. ಹೀಗಾಗಿ 30 ವರ್ಷದಿಂದ ನಡೆಸಿಕೊಂಡು ಬಂದಿರುವ ಅಡುಗೆ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಮಾರಾಟವೇ ಜೀವನ ನಿರ್ವಹಣೆಗೆ ದೊಡ್ಡ ಆಸರೆಯಾಗಿದೆ. ಅಂಗನವಾಡಿ ಕೆಲಸ ಪೂರ್ಣಗೊಂಡ ನಂತರ ಹದ್ಲಿ ಗ್ರಾಮದಲ್ಲಿ ಸಂಜೆ ಮನೆಮನೆಗೆ ತೆರಳಿ ಎಣ್ಣೆ ಮಾರಾಟ ಮಾಡುತ್ತಾರೆ. ಇಬ್ರಾಹಿಂ ಸಹ ಈ ಕಾರ್ಯಕ್ಕೆ ನೆರವಾಗುತ್ತಿದ್ದರು. ಈ ತಾಯಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮನೆಯಲ್ಲಿ ಬಡತನವಿದ್ದರೂ ಮಕ್ಕಳ ಓದಿಗೆ ತೊಂದರೆ ಮಾಡಿಲ್ಲ.
ನಿತ್ಯ ಅಂಗನವಾಡಿ ಕಾರ್ಯ ಮುಗಿದ ನಂತರ ಮನೆಮನೆಗೆ ಎಣ್ಣೆ ಡಬ್ಬಿಗಳನ್ನು ಹೊತ್ತು ಮಾರಾಟಮಾಡುವ ಕಾರ್ಯ ಮಾಡುತ್ತಿದ್ದೇನೆ. ಪತಿ ಕೂಲಿ ಕೆಲಸಕ್ಕೆ ತೆರಳುತ್ತಾರೆ. ಬಂದ ಸ್ವಲ್ಪ ಆದಾಯದಲ್ಲಿ ಜೀವನ ಮುಂದುವರಿಸಿದ್ದೇವೆ. ಮಗನ ಸಾಧನೆಗೆ ನಮಗೆ ಹೆಮ್ಮೆ ಮೂಡಿಸಿದೆ ಎನ್ನುತ್ತಾರೆ ಶೈನಾಜ್‌ಬಿ ರೇವಡಿಗಾರ.