ಐಬಿಪಿಎಸ್: ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿದ್ದರೆ ಪರೀಕ್ಷೆಗೆ ಅಡ್ಡಿ- ಆಪ್ ಎಚ್ಚರಿಕೆ

IBPS-600x400
Published on

ಬೆಂಗಳೂರು :  ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಹುದ್ದೆಗಳಿಗೆ ನೇಮಕ ಮಾಡುವ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿದ್ದರೆ ಪರೀಕ್ಷೆಗೆ ಅಡ್ಡಿಪಡಿಸುವುದಾಗಿ ಆಮ್ ಆದ್ಮಿಪಕ್ಷ ಎಚ್ಚರಿಸಿದೆ. ಐಬಿಪಿಎಸ್ ಕನ್ನಡಿಗರಿಗೆ ಮೋಸ ಮಾಡಿದ್ದು, ಕನ್ನಡದಲ್ಲಿ ಪರೀಕ್ಷೆ ಬರೆಯಲು ಆಸ್ಪದ ನೀಡದೆ ದ್ರೋಹ ಎಸಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಸುದ್ದಿಗೋಷ್ಠಿಯಲ್ಲಿ ಖಂಡಿಸಿದ್ದಾರೆ.

ಕನ್ನಡದಲ್ಲಿ ಪರೀಕ್ಷೆ ಬರೆಯಲು ಆಸ್ಪದ ನೀಡದಿದ್ದರೆ ಪರೀಕ್ಷೆ ನಡೆಯಲು ಬಿಡುವುದಿಲ್ಲ. ರಾಜ್ಯದ 25 ಜನ ಸಂಸದರು ಹಾಗೂ ಕುರ್ಚಿಗೆ ಅಂಟಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಅನ್ಯಾಯದ ಬಗ್ಗೆ ಕಿಂಚಿತ್ತೂ ದನಿ ಎತ್ತದೆ ಕನ್ನಡಿಗರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಕೇವಲ ಬಾಯಿ ಚಪಲಕ್ಕೆ ‘ಕನ್ನಡ ಕಾಯಕ ವರ್ಷ’ ಎಂದು ಘೋಷಿಸದೆ ಕನ್ನಡಿಗರು ಗೌರವಯುತ ಜೀವನ ನಡೆಸಲು ಪ್ರಯತ್ನ ಮಾಡಿ ಹಾಗೂ ಕೇಂದ್ರ ಸರ್ಕಾರಕ್ಕೆ ಈ ವಿಷಯದ ಕುರಿತು ಮನವರಿಕೆ ಮಾಡಿಕೊಡಿ ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಹುಟ್ಟಿ, ಹೆಮ್ಮರವಾಗಿ ಬೆಳೆದು ನಿಂತ ಬ್ಯಾಂಕ್‌ಗಳನ್ನು ವಿಲೀನ ಮಾಡುವಾಗಲೂ ಉಸಿರೆತ್ತದ 25 ಜನ ಸಂಸದರೇ ಹೇಡಿತನ ಬಿಟ್ಟು ಕೇಂದ್ರ ಸರ್ಕಾರದ ಬಳಿ ಮಾತನಾಡಿ ಇಲ್ಲದಿದ್ದರೇ ರಾಜೀನಾಮೆ ಕೊಟ್ಟು ತಲೆಮರೆಸಿಕೊಳ್ಳಿ ಎಂದು ವ್ಯಂಗ್ಯವಾಡಿದರು.
ಕಳೆದ ವರ್ಷ ಸಂಸತ್ತಿನಲ್ಲಿ ಮುಂದಿನ ಬಾರಿಯ ಎಲ್ಲ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಸ್ಥಾನ ನೀಡಲಾಗುವುದು ಎಂದು ಭರವಸೆ ನೀಡಿದ್ದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲ ಸೀತಾರಾಮನ್ ಕೊಟ್ಟ ಮಾತು ತಪ್ಪಿದ್ದಾರೆ ಎಂದು ಕಿಡಿಕಾರಿದರು.

ಹುದ್ದೆಗಳ ಸಂಖ್ಯೆ ಹೆಚ್ಚಿಸಿ: ಪ್ರಸ್ತುತ ಕೇವಲ ಮೂರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಒಟ್ಟು 1,200 ಹುದ್ದೆಗಳಿಗೆ ಮಾತ್ರ ನೇಮಕ ನಡೆಯಲಿದೆ. ಈ ಸಂಖ್ಯೆಯನ್ನು ನೋಡಿದರೆ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಉಪಯೋಗವಾಗಲಿದೆ. ಆದ ಕಾರಣ ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net