ಐಬಿಎಂಆರ್ ಉತ್ಸವ ಸಿರಿ 5ರಿಂದ,  ರಜತ ಮಹೋತ್ಸವ ಅಂಗವಾಗಿ ವೈವಿದ್ಯಮಯ ಕಾರ್ಯಕ್ರಮ

IMG_20250502_111640_48.jpg
Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಅಕ್ಷಯ ಕಾಲನಿಯಲ್ಲಿರುವ ಐಬಿಎಂಆರ್ ಕಾಲೇಜು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಮೇ 5ರಿಂದ ಮೂರು ದಿನಗಳವರೆಗೆ ಐಬಿಎಂಆರ್ ಉತ್ಸವ ಐಸಿರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥಾಪಕ ಚೇರ್ಮನ್ ವಿನಯಚಂದ್ರ ಮಹೇಂದ್ರಕರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1999ರಲ್ಲಿ ವಿದ್ಯಾಭಾರತಿ ಫೌಂಡೇಷನ್ ಅಡಿಯಲ್ಲಿ ಐಬಿಎಂಆರ್ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ಅಂದಿನಿಂದ ನಿರಂತರವಾಗಿ ಗುಣಮಟ್ಟದ ಶಿಕ್ಷಣ, ಜ್ಞಾನವರ್ಧನೆ ಹಾಗೂ ಉದ್ಯೋಗಾರ್ಹತೆ ಉತ್ತೇಜಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದರು.

ಮೇ 5ರಂದು ಬೆಳಗ್ಗೆ 10ಕ್ಕೆ ಐಬಿಎಂಆರ್ ಕಾಲೇಜಿನಲ್ಲಿ ನಡೆಯುವ ಸಾಂಸ್ಕೃತಿಕ ಸಂಚಾರ ಕಾರ್ಯಕ್ರಮಕ್ಕೆ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡುವರು. ಅತಿಥಿಗಳಾಗಿ ಮೇಯರ್ ರಾಮಪ್ಪ ಬಡಿಗೇರ ಭಾಗವಹಿಸುವರು. ವಿದ್ಯಾರ್ಥಿಗಳು ವಿವಿಧ ವಾದ್ಯ ಮೇಳಗಳೊಂದಿಗೆ ನಾಲ್ಕು ಕಿ.ಮೀ. ಮೆರವಣಿಗೆ ನಡೆಸುವರು. ವೈಭವದ ಭಾರತೀಯ ಪರಂಪರೆ ಪ್ರದರ್ಶನ ನಡೆಯಲಿದೆ. ಜನಪದ ಕಲಾವಿದ ಡಾ. ರಾಮಣ್ಣ ಮೂಲಗಿ ಇವರನ್ನು ಸನ್ಮಾನಿಸಲಾಗುವುದು. ಸಂಜೆ 5ಕ್ಕೆ ಹಳೆಯ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

6ರಂದು ಬೆಳಗ್ಗೆ 10ಕ್ಕೆ ಅಂತರ್ ಕಾಲೇಜು ನೃತ್ಯ ಸ್ಪರ್ಧೆ ನೃತ್ಯಾಯನ್ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ರೆಟ್ರೋದಿಂದ ಮೆಟ್ರೋವರೆಗೆ ಎಂಬ ಥೀಮ್ ನೊಂದಿಗೆ ಹೆಜ್ಜೆ ಹಾಕಲಿದ್ದಾರೆ. ಇದರ ಉದ್ಘಾಟನೆಯನ್ನು ಕವಿವಿ ಸಿಂಡಿಕೇಟ್ ಸದಸ್ಯ ಡಾ. ಬಸವರಾಜ ಗೊರವರ ನೆರವೇರಿಸುವರು. ಅತಿಥಿಗಳಾಗಿ ಐಐಎಂ ಪ್ರಾಧ್ಯಾಪಕ ಸರಿತ್ ಕುಮಾರ್ ಪಾಲ್ಗೊಳ್ಳುವರು. ಸಂಜೆ 4ರಿಂದ ಸ್ವಾದ ಆಗರ ಅಡುಗೆ ಮೇಳ ನಡೆಯಲಿದೆ. ಮಾಜಿ ಮೇಯರ್ ವೀಣಾ ಬರದ್ವಾಡ ಉದ್ಘಾಟಿಸುವರು.

ಮೇ 7ರಂದು ಬೆಳಗ್ಗೆ 11ಕ್ಕೆ ಕಾರ್ಪೊರೇಟ್ ಥೀಮ್ ರ್ಯಾಂಪ್ ವಾಕ್ ವೇಷ ವಿಲಾಸ ನಡೆಯಲಿದೆ. ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ ಭಾಗವಹಿಸುವರು. ಸಂಜೆ 4ಕ್ಕೆ ನಿರೂಪಮಾ ಮೆಗಾ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸುವರು. ಗಾಯಕ ಚಂದನ್ ಶೆಟ್ಟಿ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದೆ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ಡಾ. ಸದಾನಂದ ಹವಣಗಿ, ಪ್ರದಿಪ ಶರ್ಮಾ, ಸುಮಂತ, ಡಾ. ಅರುಣ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net