

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಅಕ್ಷಯ ಕಾಲನಿಯಲ್ಲಿರುವ ವಿದ್ಯಾಭಾರತಿ ಫೌಂಡೇಷನ್ ಶಿಕ್ಷಣ ಸಂಸ್ಥೆಯ ಐಬಿಎಂಆರ್ ಕಾಲೇಜಿನ ರಜತ ಸಂಭ್ರಮದ ಅಂಗವಾಗಿ ಹಲವು ಸಾಮಾಜಿಕ ಹಾಗೂ ವಿಧಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಚೇರ್ಮನ್ ವಿನಯಚಂದ್ರ ಮಹೇಂದ್ರಕರ ತಿಳಿಸಿದರು.
ಕಾಲೇಜು ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1999ರಲ್ಲಿ ಕೇವಲ 18 ವಿದ್ಯಾರ್ಥಿಗಳಿಂದ ಆರಂಭವಾದ ಕಾಲೇಜಿನಲ್ಲಿ ಇಂದು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಎಂಬಿಎ ಪದವಿಯಿಂದ ಆರಂಭಗೊಂಡು ಇಂದು 14ಕ್ಕೂ ಹೆಚ್ಚು ವಿವಿಧ ಕೋರ್ಸ್ ಗಳನ್ನು ಪರಿಚಯಿಸಲಾಗಿದೆ ಎಂದರು.
ಜತೆಗೆ ಕೌಶಲಯುತ ಶಿಕ್ಷಣಕ್ಕೆ ಆದ್ಯತೆ ನೀಡಿರುವುದರಿಂದ ಪದವಿ ಮುಗಿಸಿ ಹೊರಬರುತ್ತಲೇ ಯಾವುದಾದರೂ ಉದ್ಯೋಗಕ್ಕೆ ಸೇರಿಕೊಳ್ಳುವ ಅರ್ಹತೆಯನ್ನು ವಿದ್ಯಾರ್ಥಿಗಳು ಪಡೆದಿರುತ್ತಾರೆ. ವಿದ್ಯಾಥಿರ್ಗಳ ಅನುಕೂಲಕ್ಕಾಗಿ ಪ್ರತಿ ವರ್ಷ ಜಾಬ್ ಫೇರ್ ಕೂಡ ಆಯೋಜನೆ ಮಾಡಲಾಗುತ್ತಿದೆ ಎಂದರು.
ಅರ್ಹರಿಗೆ ಸ್ಕಾಲರ್ ಶಿಪ್:
ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಈ ವರ್ಷ ಬೆಳ್ಳಿ ಹಬ್ಬದ ಪ್ರಯುಕ್ತ ಬಡ ಮಕ್ಕಳ ಉಚಿತ ವಿದ್ಯಾಭ್ಯಾಸಕ್ಕೆ ಸುಮಾರು 25 ಲಕ್ಷ ರೂ.ಗಳನ್ನು ಸ್ಕಾಲರ್ಶಿಪ್ ಮೀಸಲಿಡಲಾಗಿದೆ. ಎರಡು ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಕಾನೂನು ಕಾಲೇಜು:
ಐಬಿಎಂಆರ್ ಸಂಸ್ಥೆ ಹೊಸ ಕಾನೂನು ಕಾಲೇಜು ಆರಂಭಿಸಲು ಅನುಮತಿ ಸಿಕ್ಕಿದೆ. ಜತೆಗೆ ಸಿಬಿಎಸ್ಇ ಸ್ಕೂಲ್ ಪ್ರಾರಂಭಿಸಲು ಯೋಜಿಸಲಾಗಿದ್ದು, ತಾಲೂಕಿನ ಶೆರೇವಾಡದ ನೂತನ ಕ್ಯಾಂಪಸ್ನಲ್ಲಿ ಇವುಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಹಾಗೂ ಆನ್ ಲೈನ್ ಪರೀಕ್ಷೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ಇಲ್ಲಿ ಇಂತಹ ಪರೀೆಗಳು ನಡೆಯುತ್ತಿವೆ. ಇದಕ್ಕೆ ಬೇಕಾದ ಕಂಪ್ಯೂಟರ್ ಲ್ಯಾಬ್ ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗಿದೆ ಎಂದು ಮಹೇಂದ್ರಕರ ತಿಳಿಸಿದರು.
ಶನಿವಾರ ವಾಕ್ ಥಾನ್:
ಸಾರ್ವಜನಿಕರಲ್ಲಿ ಸಾಕ್ಷರತೆ ಅರಿವು ಮತ್ತು ಹಸಿರು ಉಸಿರು ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ನವೆಂಬರ್ 16ರಂದು ಬೆಳಗ್ಗೆ 7ಕ್ಕೆ ವಾಕ್ಥಾನ್ ಏರ್ಪಡಿಸಲಾಗಿದೆ ಎಂದು ನಿರ್ದೇಶಕ ಡಾ. ಶಿವಪ್ರಕಾಶ ಹಿರೇಮಠ ತಿಳಿಸಿದರು.
ಕಾಲೇಜಿನಿಂದ ಆರಂಭವಾಗುವ ವಾಕ್ಥಾನ್ ತೋಳನಕೆರೆ, ಸಿದ್ದೇಶ್ವರ ಪಾರ್ಕ್ ಮೂಲಕ ಹಾಯ್ದು ಕಾಲೇಜಿನಲ್ಲಿ ಸಮಾರೋಪಗೊಳ್ಳಲಿದೆ. ಸುಮಾರು 4 ಕಿ.ಮೀ ನಡಿಗೆಗೆ ಅಂತಾರಾಷ್ಟ್ರೀಯ ಕ್ರೀಡಾಪಟು ದೇವಪ್ಪ ಮೋರೆ ಚಾಲನೆ ನೀಡುವರು.
ಬರುವ ಫೆಬ್ರವರಿ ತನಕ ಬೆಳ್ಳಿ ಹಬ್ಬದ ಸಂಭ್ರಮದ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.
ನಿರ್ದೇಶಕ ಪ್ರದಿಪ ಶರ್ಮಾ, ಡೀನ್ ಸದಾನಂದ ಹಾವಣಗಿ ಇತರರು ಇದ್ದರು.