

ಬೆಂಗಳೂರು: ರಾಜಧಾನಿಯ ಸುತ್ತಮುತ್ತ ನಡೆಯುತ್ತಿರುವ ಭೂ ಮಾಫಿಯಾಕ್ಕೆ ಕಡಿವಾಣ ಹಾಕಲು ಮುಂದಾದ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರನ್ನು ಸರ್ಕಾರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಇದಕ್ಕೆ ಪೂರಕವಾಗಿ, ತಮ್ಮನ್ನು ಜ.14ಕ್ಕೆ ವರ್ಗಾವಣೆ ಮಾಡಲಾಗಿರುವ ‘ಐಎಂಎ ವಿಶೇಷಾಧಿಕಾರಿ’ ಹುದ್ದೆಯ ಅಪ್ರಸ್ತುತತೆ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ಭೂಮಾಫಿಯಾ ವಿರುದ್ಧ ಕೈಗೊಳ್ಳಲಾಗುತ್ತಿದ್ದ ಕ್ರಮಗಳ ಕುರಿತು ಹರ್ಷ ಗುಪ್ತ ಸರ್ಕಾರಕ್ಕೆ 8 ಪುಟಗಳ ಪತ್ರ ಬರೆದಿದ್ದು, ಪತ್ರದ ಪ್ರತಿ ವಿಜಯವಾಣಿಗೆ ಲಭ್ಯವಾಗಿದೆ.
ಭೂಮಿ ಲಪಟಾಯಿಸಲು ಸಂಚು: ಪರಿಶಿಷ್ಟ ಸಮು ದಾಯದ ಭೂಮಿಯನ್ನು ಅನ್ಯರಿಗೆ ಮಾರಾಟ ಮಾಡಲು ಅನೇಕ ನಿಬಂಧನೆ ಗಳಿದ್ದು, ಅವೆಲ್ಲವನ್ನು ಪೂರೈಸಿ ಜಿಲ್ಲಾಧಿಕಾರಿ ಅನುಮತಿ ಪಡೆದು ಮಾರಾಟ ಮಾಡಬೇಕು. ಆದರೆ ರಿಯಲ್ಎಸ್ಟೇಟ್ ಆಸೆ ತೋರಿಸಿ ಬೆಂಗಳೂರು ಸುತ್ತಾಮುತ್ತ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರ ಭೂಮಿಯನ್ನು ಖರೀದಿಸುವ ಪ್ರಯತ್ನಗಳು ನಡೆದಿವೆ. ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿತ್ತು. ಆದರೆ ಪರಿಶಿಷ್ಟರಿಗೆ ಅನ್ಯಾಯವಾಗುವ ಸಂಶಯ ಇದ್ದುದರಿಂದ ಹರ್ಷಗುಪ್ತಾ ಕಡತಗಳ ಪರಾಮರ್ಶೆ ನಡೆಸುತ್ತಿರುವಾಗಲೇ ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸಿ, ಜಿಲ್ಲಾಧಿಕಾರಿಯೇ ನೇರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿತ್ತು.
ಅಮಾನತು ಅಧಿಕಾರಿಗಳ ಲಾಬಿ?: ಕಂದಾಯ ಇಲಾಖೆ ಅಧಿಕಾರಿಗಳೇ ಸರ್ಕಾರದ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಕುರಿತು ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದವು ಎಂದು ಹರ್ಷ ಗುಪ್ತಾ ಪತ್ರದಲ್ಲಿ ತಿಳಿಸಿದ್ದಾರೆ. ಪರಭಾರೆ ಮಾಡಬಾರದು ಎಂದು ಸರ್ಕಾರದ ಆದೇಶದ ಹೊರತಾಗಿಯೂ ಬೆಂಗಳೂರು ಪೂರ್ವ ಜಿಲ್ಲೆಯ ಮಲ್ಲೂರು ಗ್ರಾಮದಲ್ಲಿ ಅಧಿಕಾರಿಗಳು ಸರ್ಕಾರಿ ಭೂಮಿ ಮಾರಾಟ ಮಾಡಿರುವುದು ಚರ್ಚ್ ಪದಾಧಿಕಾರಿಗಳ ದೂರಿನಿಂದ ತಿಳಿದುಬಂದಿತ್ತು.
ತಪಾಸಣೆ ನಡೆಸಿದಾಗ, ದೂರು ಸತ್ಯವಾಗಿತ್ತು. ಕೂಡಲೇ ಸಂಬಂಧಿತ ತಹಸೀಲ್ದಾರ್, ವಿಶೇಷ ತಹಸೀಲ್ದಾರ್ ಮತ್ತು ಉಪನೋಂದಣಾಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು, ಶಿಸ್ತು ಕ್ರಮಕ್ಕೆ ಆದೇಶಿಸಿ, ಕ್ರಿಮಿನಲ್ ದೂರನ್ನೂ ದಾಖಲಿಸಲಾಯಿತು. ಬೆಂಗಳೂರಿನ ಭೂದಾಖಲೆಗಳ ಉಪ ನಿರ್ದೇಶಕರು ಹಾಗೂ ಆಯುಕ್ತರ ವಿರುದ್ಧವೂ ದೂರು ದಾಖಲಿಸಲಾಯಿತು. ಆದರೆ ಅಧಿಕಾರಿ ಮತ್ತು ತಹಸೀಲ್ದಾರ್ ವಿವಿಧ ಮಾರ್ಗಗಳ ಮೂಲಕ ಮತ್ತದೇ ಹುದ್ದೆಗೆ ಬಂದು ಕುಳಿತರು. ಬೇರೆಡೆ ವರ್ಗಾಯಿಸುವಂತೆ ಮಾಡಿದ ಮನವಿಗೆ ಸರ್ಕಾರ ಸ್ಪಂದಿಸಲಿಲ್ಲ. ಇದೇ ರೀತಿ ಅನೇಕ ತಹಸೀಲ್ದಾರರು ಪೋಡಿ ಮಾಡಿಕೊಡುವಲ್ಲಿ, ಸಾಮಾನ್ಯ ಜನರನ್ನು ನಿರ್ಲಕ್ಷಿಸಿ ಕೆಲವರಿಗಷ್ಟೆ ಅನುಕೂಲ ಮಾಡಿಕೊಡುತ್ತಿರುವುದೂ ಗಮನಕ್ಕೆ ಬಂದಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೃಷಿ ಭೂಮಿಯನ್ನು ಕೃಷಿಯೇತರ ಎಂದು ಪರಿವರ್ತಿಸಲು, ಹಿಂದಿನ ದಿನಾಂಕದ ನಕಲಿ ದಾಖಲೆಗಳನ್ನು ಭೂಮಿ ತಂತ್ರಾಂಶಕ್ಕೆ ಅಪ್ಲೋಡ್ ಮಾಡಿರುವ ಪ್ರಕರಣವನ್ನೂ ಪತ್ತೆ ಹಚ್ಚಲಾಗಿತ್ತು. ಇನ್ನು ಕೆಲ ಪ್ರಕರಣಗಳಲ್ಲಿ, ಗ್ರಾಮದ ಸಾರ್ವಜನಿಕ ರಸ್ತೆಯ ಅಧಿಸೂಚನೆಯಲ್ಲಿ ಪ್ರಭಾವಿಗಳ ಕೈವಾಡ ಇರುವುದೂ ಕಂಡುಬಂದಿತ್ತು. ಅದನ್ನು ಡಿನೋಟಿಫಿಕೇಷನ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು ಎಂದು ಹರ್ಷಗುಪ್ತ ಪತ್ರದಲ್ಲಿ ತಿಳಿಸಿದ್ದಾರೆ.
ಐಎಂಎ ವಿಶೇಷಾಧಿಕಾರಿ
ಪ್ರಾದೇಶಿಕ ಆಯುಕ್ತರಾಗಿದ್ದಾಗಲೇ ಐಎಂಎ ಪ್ರಕರಣದ ಸಕ್ಷಮ ಪ್ರಾಧಿಕಾರವಾಗಿ ಹರ್ಷಗುಪ್ತ ಕಾರ್ಯನಿರ್ವಹಿಸುತ್ತಿದ್ದರು. ಅಸಲಿಗೆ ಐಎಂಎ ಹಗರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ತನಿಖೆ ವೇಳೆ ಸಿಗುವ ಐಎಂಎ ಆಸ್ತಿಯನ್ನು ಹರಾಜು ಮಾಡುವುದು ಹಾಗೂ ಅರ್ಹ ಫಲಾನುಭವಿಗಳಿಗೆ ಅದರ ಮೊತ್ತವನ್ನು ಹಂಚಿಕೆ ಮಾಡುವುದಷ್ಟೆ ಈ ಹುದ್ದೆಯ ಕಾರ್ಯ ಎಂದು ಹರ್ಷ ಗುಪ್ತ ಪತ್ರದಲ್ಲಿ ತಿಳಿಸಿದ್ದಾರೆ. ಇದಕ್ಕೆ ಸಾಮಾನ್ಯ ಎಸಿ ಮಟ್ಟದ ಹುದ್ದೆಯೇ ಸಾಕು. ಇಲ್ಲವೇ ಪ್ರಾದೇಶಿಕ ಆಯುಕ್ತರು ಅಥವಾ ಜಿಲ್ಲಾಧಿಕಾರಿಗೇ ಹೆಚ್ಚುವರಿ ಹೊಣೆ ನೀಡಬಹುದು. ಅದಕ್ಕಾಗಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ನಿಯೋಜಿಸುವ ಅಗತ್ಯವೇ ಇರಲಿಲ್ಲ.
ಕೆಎಂಎಫ್ನಲ್ಲಿ ಗೋಲ್‍ಮಾಲ್
ತುಮಕೂರು ಹಾಲು ಒಕ್ಕೂಟದ ಚುನಾವಣೆ ಸಮಯದಲ್ಲಿ ಚುನಾವಣಾಧಿಕಾರಿಯಾಗಿದ್ದ ಹರ್ಷ ಗುಪ್ತ, ಸರ್ಕಾರದ ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಬಾರದು ಎಂದು ತಿಳಿಸಿದ್ದರು. ಯಾರಿಗೆ ಮತ ನೀಡಬೇಕು ಎಂದು ಅನಧಿಕೃತವಾಗಿ ನಿರ್ದೇಶನ ಪಡೆದ ಈ ಸದಸ್ಯರು ಮತ ಚಲಾಯಿಸುವುದರಿಂದ ಸಹಕಾರ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಪಾರದರ್ಶಕ ಚುನಾವಣೆ ನಡೆಸಿದಂತಾಗುವುದಿಲ್ಲ ಎಂದಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದಿದ್ದರೆ ಸರ್ಕಾರದಿಂದ ಲಿಖಿತವಾಗಿ ನಿರ್ದೇಶನ ಪಡೆದುಬರುವಂತೆ ತಿಳಿಸಿದ್ದರು. ಇದೂ ಸಹ ಅನೇಕರ ಕಣ್ಣು ಕೆಂಪಾಗಿಸಿತ್ತು ಎನ್ನಲಾಗಿದೆ.