

ಇನ್ಸೈಟ್ಸ್ ಹೆಸರಿನ ಸಂಸ್ಥೆಯನ್ನು ಕಟ್ಟಿ ದೇಶದ ಮುಂಚೂಣಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸುವಂತೆ ಮಾಡಿ, ಐಎಎಸ್ ಕನಸು ಕಂಡ ಸಾವಿರಾರು ಅಭ್ಯರ್ಥಿಗಳಿಗೆ ಯಶಸ್ಸಿನ ದಾರಿ ತೋರಿದವರು ಜಿ.ಬಿ. ವಿನಯ್ಕುಮಾರ್. ಅದೇ ಹೊತ್ತಲ್ಲಿ ಎಲ್ಲರಿಗೂ ಸಮಪಾಲು ಸಿಗಬೇಕು. ರಾಜಕೀಯ ಹಿನ್ನೆಲೆ ಇಲ್ಲದವರಿಗೆ ರಾಜಕಾರಣದಲ್ಲಿ ಪ್ರಾಮುಖ್ಯ ದೊರೆಯಬೇಕು. ಸಾಮಾಜಿಕ ಕಳಕಳಿ, ಬದ್ಧತೆ ಇರುವವರು ರಾಜಕೀಯಕ್ಕೆ ಬರಬೇಕೆಂಬ ಅಭಿಲಾಷೆಯಿಂದ ಸ್ವಾಭಿಮಾನಿ ಬಳಗವನ್ನು ಕಟ್ಟಿದ್ದಾರೆ. ರಾಜಕೀಯದಿಂದ ವಂಚಿತರಾದವರೆಲ್ಲರೂ ರಾಜಕಾರಣದಲ್ಲಿ ನೆಲೆ ನಿಂತು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂಬ ಆಶಾವಾದ ಹೊತ್ತು ರಾಜ್ಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ಕ್ರಿಯಾಶೀಲರಾಗಿರುವ ಯುವಕರನ್ನು ಒಗ್ಗೂಡಿಸಿದ್ದಾರೆ. ‘ರಾಜಕಾರಣಕ್ಕೆ ಬರುವುದೇ ಸ್ವಾರ್ಥಕ್ಕಾಗಿ. ನಾನು, ನನ್ನ ಕುಟುಂಬದವರು ಮಾತ್ರ ರಾಜಕೀಯ ಆಶ್ರಯದಲ್ಲಿರಬೇಕು’ ಎನ್ನುವ ಕಾಲದಲ್ಲಿ ಜಿ.ಬಿ. ವಿನಯಕುಮಾರ್ ಅಪವಾದವಾಗಿ ನಿಲ್ಲುತ್ತಾರೆ.
ದಾವಣಗೆರೆ : ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಇವರು ಮುಂದೆ ತನ್ನಂತೆ ಗುರಿ ಹೊಂದಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಯಶಸ್ಸಿನ ದಾರಿ ತೋರಿಸುವ ಮಟ್ಟಕ್ಕೆ ಬೆಳೆದರು. ನಿರಂತರ ಅಧ್ಯಯನ, ಶ್ರದ್ಧೆ, ಪರಿಶ್ರಮದ ಮೂಲಕ ನಾಗರಿಕ ಸೇವೆಯಲ್ಲಿ ಉನ್ನತ ಹುದ್ದೆಗೆ ಏರಬಹುದು ಎಂಬುದನ್ನು ತಾವು ನೀಡುವ ತರಬೇತಿಯ ಮೂಲಕ ನಿರೂಪಿಸುತ್ತ ಬಂದಿದ್ದಾರೆ. ಇನ್ಸೈಟ್ಸ್ ಹೆಸರಿನ ಸಂಸ್ಥೆಯನ್ನು ಕಟ್ಟಿ ದೇಶದ ಮುಂಚೂಣಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸುವಂತೆ ಮಾಡಿದ್ದಾರೆ. ಅವರೇ ಜಿ.ಬಿ. ವಿನಯ್ ಕುಮಾರ್.
ಐಎಎಸ್, ಐಪಿಎಸ್ ತರಬೇತಿ ಪಡೆಯಲು ಪ್ರತಿ ವರ್ಷ 5-6 ಸಾವಿರ ಕನ್ನಡಿಗರು ದೆಹಲಿಗೆ ಹೋಗುತ್ತಿದ್ದ ದಿನಗಳವು. ತರಬೇತಿಯ ಶುಲ್ಕ, ಊಟ, ವಸತಿ ಸೇರಿ ವರ್ಷಕ್ಕೆ ಒಬ್ಬರಿಗೆ 5 ಲಕ್ಷ ರೂ. ಖರ್ಚು ಬರುತ್ತಿತ್ತು. ಒಟ್ಟಾರೆ ರಾಜ್ಯದಿಂದ ಹೋಗುತ್ತಿದ್ದ ಅಭ್ಯರ್ಥಿಗಳಿಂದ 250 ಕೋಟಿ ರೂ.ಗಳಷ್ಟು ಹಣ ಒಂದು ವರ್ಷಕ್ಕೆ ಈ ಉದ್ದೇಶಕ್ಕೆ ವೆಚ್ಚವಾಗುತ್ತಿತ್ತು.
ಆ ಸಂದರ್ಭದಲ್ಲಿ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್ಸಿ) ಬರೆಯುವವರಿಗೆ ಮಾರ್ಗದರ್ಶನ ನೀಡುವ ಸಂಸ್ಥೆಗಳು ಬೆಂಗಳೂರಿನಲ್ಲಿ ಇರಲಿಲ್ಲ. ಇದನ್ನು ಮನಗಂಡು ವಿನಯ್ ಕುಮಾರ್ 2014 ರಲ್ಲಿ ಇನ್ಸೈಟ್ಸ್ ಸಂಸ್ಥೆಯನ್ನು ಸ್ಥಾಪಿಸಿದರು. ಆರಂಭದ ಎರಡು ವರ್ಷಗಳಲ್ಲೇ ಹಲವು ರ್ಯಾಂಕ್ಗಳು ಬಂದವು. ವರ್ಷದಿಂದ ವರ್ಷಕ್ಕೆ ರ್ಯಾಂಕ್ಗಳ ಸಂಖ್ಯೆ ಬೆಳೆಯುತ್ತ ಹೋಯಿತು. ಇದುವರೆಗೆ ವಿನಯ್ ಕುಮಾರ್ ಗರಡಿಯಲ್ಲಿ ಪಳಗಿ ಯುಪಿಎಸ್ಸಿ ಪರೀಕ್ಷೆಯನ್ನು ಗೆದ್ದು ದೇಶದ ವಿವಿಧೆಡೆ 1500 ಅಧಿಕಾರಿಗಳು ಸೇವೆ ಸಲ್ಲಿಸುತ್ತಿರುವುದು ವಿನಯ್ ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
ಹಳ್ಳಿಯ ಪ್ರತಿಭೆ
ವಿನಯ್ ಕುಮಾರ್ ಜನಿಸಿದ್ದು ದಾವಣಗೆರೆ ತಾಲೂಕು ಕಕ್ಕರಗೊಳ್ಳ ಗ್ರಾಮದಲ್ಲಿ. 5ನೇ ತರಗತಿ ವರೆಗೆ ಅಲ್ಲಿಯೇ ವ್ಯಾಸಂಗ. ನಂತರ ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿ ಚಿತ್ರದುರ್ಗ ಜಿಲ್ಲೆ ಉಡುವಳ್ಳಿಯಲ್ಲಿ 6 ರಿಂದ 12ನೇ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿದರು. ಬಹುಶಃ ಆ ಅವಧಿಯಲ್ಲೇ ಅವರ ವ್ಯಕ್ತಿತ್ವ ವಿಕಾಸವಾಗುತ್ತ ಹೋಯಿತು. 11 ಮತ್ತು 12ನೇ ತರಗತಿಯಲ್ಲಿ ಸ್ಕೂಲ್ ಕ್ಯಾಪ್ಟನ್ ಹಾಗೂ ಸ್ಪೋರ್ಟ್ಸ್ ಕ್ಯಾಪ್ಟನ್ ಆಗಿದ್ದರು. ಕಬಡ್ಡಿಯಲ್ಲಿ 16 ವರ್ಷದೊಳಗಿನ ತಂಡದಲ್ಲಿ ರಾಜ್ಯಮಟ್ಟದ ವರೆಗೂ ಆಡಿ ಛಾಪು ಮೂಡಿಸಿದ್ದರು. ಹನ್ನೆರಡನೇ ತರಗತಿಯ ನಂತರ ಮೆಡಿಕಲ್ ಸೀಟು ಸಿಕ್ಕಿತ್ತಾದರೂ, ಶುಲ್ಕ ಭರಿಸುವುದು ಕಷ್ಟವಾಗಿದ್ದರಿಂದ ಹೋಗಲಿಲ್ಲ. ಬೆಂಗಳೂರಿನಲ್ಲಿ ತಳಿಶಾಸ್ತ› ವಿಷಯದಲ್ಲಿ ಬಿಎಸ್ಸಿ ಪೂರೈಸಿದರು. ನಂತರ ಸೆಂಟ್ರಲ್ ಕಾಲೇಜಿನಲ್ಲಿ ಕೆಮಿಸ್ಟಿ›ಯಲ್ಲಿ ಎಂಎಸ್ಸಿ ಸೇರಿದರು. ಆ ಹಂತದಲ್ಲೇ ಅವರಿಗೆ ಐಎಎಸ್ ಆಗುವ ಹುಚ್ಚು ಹತ್ತಿದ್ದರಿಂದ ಎಂಎಸ್ಸಿ ಓದು ಮೊಟಕುಗೊಳಿಸಿದರು.
ದೇಶದ ಅಭಿವೃದ್ಧಿಯೇ ನನ್ನ ಧ್ಯೇಯ
ರಾಜ್ಯದ ವಿವಿಧ ತಾಲೂಕುಗಳಲ್ಲಿ ಪ್ರತಿಭಾವಂತರು, ರಾಜಕೀಯ ಮುನ್ನೆಲೆಗೆ ಬಂದು ಸಮಾಜಸೇವೆ ಮಾಡಬೇಕೆಂಬ ಸದುದ್ದೇಶ ಹೊಂದಿರುವರು ಹಾಗೂ ದೇಶದ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯ ಕೊಡುವ ಯುವಕರಿಗೆ ಪ್ರೇರಣೆಯಾಗಿ ಸ್ವಾಭಾವಿಕವಾಗಿ ಈ ಸ್ವಾಭಿಮಾನಿ ಬಳಗ ಸ್ಥಾಪಿಸಿದ್ದೇನೆ ಎನ್ನುವ ಜಿ.ಬಿ. ವಿನಯಕುಮಾರ್, ಯುವಕರಿಗೆ ಆದರ್ಶಪ್ರಾಯವಾಗಿದ್ದಾರೆ. ದೇಶದ ಅಭಿವೃದ್ಧಿಯೇ ನನ್ನ ಧ್ಯೇಯ ಎನ್ನುವ ಘೊಷಣೆಯೊಂದಿಗೆ ರಾಜಕೀಯದಲ್ಲಿ ವಿಶೇಷ ವ್ಯಕ್ತಿ ಎನಿಸಿದ್ದಾರೆ. ರಾಜಕಾರಣಕ್ಕೆ ಬರುವುದು ಕೇವಲ ಸ್ವಾರ್ಥಕ್ಕೆ ಎನ್ನುವ ಈ ಕಾಲಘಟ್ಟದಲ್ಲಿ ಜಿ.ಬಿ. ವಿನಯಕುಮಾರ್ ವಿಭಿನ್ನವಾಗಿ ಕಾಣುತ್ತಾರೆ. ರಾಜಕೀಯವೇ ನನ್ನ ಪರಮಗುರಿ. ಆ ಮೂಲಕ ಜನತೆಯ ಸೇವೆ ಮಾಡುತ್ತೇನೆ ಎಂದು ಅವರು ಭಾವಿಸಿದ್ದಿದ್ದರೆ, ಯಾವುದಾದರೂ ರಾಷ್ಟ್ರೀಯ ಪಕ್ಷಗಳ ಮೂಲಕ ತಮ್ಮ ರಾಜಕೀಯ ಇನಿಂಗ್ಸ್ ಆರಂಭಿಸಬಹುದಿತ್ತು. ಆದರೆ ಅದಕ್ಕೆ ಅವಕಾಶ ಕೊಡದೇ ಪ್ರಾಮಾಣಿಕ ರಾಜಕೀಯದ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ. ಇವರ ಮೌಲ್ಯಾಧಾರಿತ ರಾಜಕಾರಣಕ್ಕೆ ಯುವ ಮನಸ್ಸುಗಳು ಸಹ ಕೈ ಜೋಡಿಸಿವೆ.
ಸ್ವಾಭಿಮಾನಿ ಬಳಗದ ಯುವ ಹವಾ
ಅತಿ ಕಡಿಮೆ ವೆಚ್ಚದಲ್ಲಿ ಯುವಕರಿಗೆ ಐಪಿಎಸ್, ಐಎಎಸ್ ಹಾಗೂ ಐಎಫ್ಎಸ್ ಕೋಚಿಂಗ್ ನೀಡಿ ಭಾರತದುದ್ದಕ್ಕೂ ತಮ್ಮ ಸಂಸ್ಥೆ ಮೂಲಕ ಸಾವಿರಾರು ಅಧಿಕಾರಿಗಳನ್ನು ನೀಡಿ ಖ್ಯಾತಿ ಪಡೆದಿರುವ ಇನ್ಸೈಟ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಹೋರಾಟದ ಮೂಲಕ ಸ್ಥಾಪಿತಗೊಂಡ ಸ್ವಾಭಿಮಾನಿ ಬಳಗ ಇದೀಗ ಇಡೀ ರಾಜ್ಯದಲ್ಲಿ ಮನೆ ಮಾತಾಗಿದೆ. ಪ್ರತಿ ತಾಲೂಕು, ಜಿಲ್ಲೆಗಳಿಂದ ಯುವಜನರು ಈ ಬಳಗವನ್ನು ಸೇರಿಕೊಳ್ಳುತ್ತಿದ್ದಾರೆ. ನಾಡಿನ ಸಮಸ್ತ ಯುವಕರನ್ನೊಳಗೊಂಡು, ನೆಲ, ಜಲ ಹಾಗೂ ಭಾಷೆ ವಿಚಾರವಾಗಿ ಸಂಘಟನಾತ್ಮಕವಾಗಿ ಹೋರಾಡುವ ಮೂಲಕ ಏಕತೆ ಸಾಧಿಸುವ ಜತೆಗೆ ಕನ್ನಡ ಮೂಲ ಮಣ್ಣಿನ ಅಸ್ಮಿತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸ್ವಾಭಿಮಾನಿ ಬಳಗ ಇದೀಗ ಇಡೀ ರಾಜ್ಯಕ್ಕೆ ವ್ಯಾಪಿಸಿದೆ.
ಕನಸಿನ ಬೆನ್ನೇರಿ
ಐಎಎಸ್ ಅಧಿಕಾರಿಯಾಗುವ ಕನಸಿನ ಬೆನ್ನೇರಿ ಹೊರಟ ವಿನಯ್ 2006 ರಿಂದ ಯುಪಿಎಸ್ಸಿಗೆ ತಯಾರಿ ಆರಂಭಿಸಿದರು. ಯಾವುದೇ ತರಬೇತಿ ಪಡೆಯದೇ ಸ್ವಂತ ಅಧ್ಯಯನದ ದಾರಿ ಹಿಡಿದರು. ಮ್ಯಾಗಜಿನ್ಗಳು, ಪತ್ರಿಕೆಗಳನ್ನು ಓದುತ್ತ ಜ್ಞಾನಾರ್ಜನೆ ಮಾಡತೊಡಗಿದರು. ಮೂರು ಬಾರಿ ಮೇನ್ಸ್ ಪರೀಕ್ಷೆ ಬರೆದು ಒಂದು ಬಾರಿ ಸಂದರ್ಶನವನ್ನೂ ಎದುರಿಸಿದರು. ಕೇವಲ 2 ಅಂಕಗಳಿಂದ ಅವಕಾಶ ತಪ್ಪಿತು. 2008 ರಲ್ಲಿ ಪಿಡಿಒ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾದರು. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕು ಕರ್ಪರವಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಆಗಿ 2 ವರ್ಷ ಕೆಲಸ ಮಾಡಿದರು. 2011 ರಲ್ಲಿ ಕೆ.ಎ.ಎಸ್. ಪರೀಕ್ಷೆ ಬರೆದು ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಯಾಗಿ ಆಯ್ಕೆಯೂ ಆದರು. ಆದರೆ ವಿವಿಧ ಕಾರಣಗಳಿಂದ ಆಯ್ಕೆ ಪಟ್ಟಿಯೇ ರದ್ದಾಯಿತು. ಅದೇ ಅವರ ಬದುಕಿನಲ್ಲಿ ಟರ್ನಿಂಗ್ ಪಾಯಿಂಟ್ ಆಯಿತು. ಒಂದು ಹಂತದಲ್ಲಿ ಎಲ್ಲ ಬಾಗಿಲು ಮುಚ್ಚಿದವು ಎಂದೆನಿಸಿದ ಹೊತ್ತಿನಲ್ಲಿ 2008 ರಲ್ಲಿ ಸ್ವಂತ ಬ್ಲಾಗ್ ಹುಟ್ಟು ಹಾಕಿದರು. ಪ್ರಚಲಿತ ವಿದ್ಯಮಾನಗಳ ಕುರಿತು ಅದರಲ್ಲಿ ಬರೆಯುತ್ತ ಹೋದರು. ಇದು ಬಹಳಷ್ಟು ಜನಪ್ರಿಯವಾಯಿತು.
ರಾಜಕಾರಣದ ಮಿಂಚು
ಶಿಕ್ಷಣ ಕ್ಷೇತ್ರವನ್ನು ಬಿಟ್ಟರೆ ವಿನಯ್ ಕುಮಾರ್ ರಾಜಕಾರಣದಲ್ಲೂ ಭರವಸೆ ಮೂಡಿಸಿದ್ದಾರೆ. ಜನ ಪ್ರತಿನಿಧಿಯಾಗಿ ಸಮಾಜಕ್ಕೆ ಹೆಚ್ಚಿನ ಸೇವೆ ಸಲ್ಲಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.
ಇವರ ರಾಜಕೀಯ ಪ್ರಯಾಣ ಆರಂಭವಾಗಿದ್ದು 2023 ರ ಆಗಸ್ಟ್ನಲ್ಲಿ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ತವರು ಜಿಲ್ಲೆ ದಾವಣಗೆರೆಯಲ್ಲಿ ಲೋಕಸಭಾ ಚುನಾವಣೆಯ ಅದೃಷ್ಟ ಪರೀಕ್ಷೆಗಿಳಿದರು.
ಚುನಾವಣೆಗಿಂತ ಹಲವು ತಿಂಗಳ ಮೊದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರವನ್ನು ಸುತ್ತಿದರು. ಹಳ್ಳಿ ಹಳ್ಳಿಗೆ ಹೋಗಿ ಬೇರು ಮಟ್ಟದಲ್ಲಿ ಇರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡರು. ಪಾದಯಾತ್ರೆ ಮಾಡುವ ಮೂಲಕ ಧೂಳೆಬ್ಬಿಸಿದರು. ಅಲ್ಪ ಅವಧಿಯಲ್ಲೇ ಜನರ ನಡುವೆ ಗುರುತಿಸಿಕೊಂಡು ಸಂಚಲನ ಸೃಷ್ಟಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ವಿನಯ್ ಕುಮಾರ್ ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಲಾಯಿತು.
ಅಷ್ಟು ಹೊತ್ತಿಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದ ವಿನಯ್ ಕುಮಾರ್ ಸುಮ್ಮನಾಗಲಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಎದುರಾಳಿಗಳ ನಿದ್ದೆಗೆಡಿಸಿದರು. ಅದೃಷ್ಟ ಪರೀಕ್ಷೆಯಲ್ಲಿ ವಿನಯ್ ಕುಮಾರ್ ಸೋಲಬೇಕಾಯಿತು. ವಿಧಾನಸಭೆ ಪ್ರವೇಶಿಸುವುದು ಅವರ ಮುಂದಿನ ಗುರಿಯಾಗಿದೆ.
ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ನಡೆ ಸರ್ಕಾರಿ ಶಾಲೆ ಕಡೆ ಎಂಬ ಅಭಿಯಾನ ಕೈಗೊಂಡಿದ್ದಾರೆ. ಕೃಷಿ ಅದಾಲತ್, ಆರೋಗ್ಯ ಅದಾಲತ್, ಜನತಾ ಅದಾಲತ್ ಆಯೋಜಿಸಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ.
ಓದುವ ಹವ್ಯಾಸ
ಸದಭಿರುಚಿಯ ಸಿನಿಮಾ ನೋಡುವುದು ವಿನಯ್ ಅವರ ಹವ್ಯಾಸ. ಒಳ್ಳೆಯ ಪುಸ್ತಕ ಕೈಸೇರಿದರೆ ಆಸಕ್ತಿಯಿಂದ ಓದುತ್ತಾರೆ. ಕಾರ್ ಓಡಿಸುವ ಖಯಾಲಿ ಈಗ ಕಡಿಮೆಯಾಗಿದೆ. ಮನಸ್ಸು ಸರಳತೆಯ ಕಡೆಗೆ ಹೊರಳಿದೆ. ವಿನಯ್ ಕುಮಾರ್ ಅವರದು ಮುದ್ದಾದ ಸಂಸಾರ. ಸ್ವಾತಿ ಅವರ ಬಾಳ ಸಂಗಾತಿ. ವಿಹಾನ್ ವಿಶ್ವ ಮತ್ತು ಪ್ರದ್ಯುನ್ ವಿಶ್ವ ಎಂಬ ಮಕ್ಕಳಿದ್ದಾರೆ.
ರಾಜ್ಯಾದ್ಯಂತ ಯುವಕರ ಭೇಟಿ
ಈಗಾಗಲೇ ಉತ್ತರ ಕರ್ನಾಟಕದ ಬೀದರ್, ಬೆಳಗಾವಿ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಕರಾವಳಿಯ ಮಂಗಳೂರು ಸೇರಿದಂತೆ ಒಟ್ಟು 14 ಜಿಲ್ಲೆಗಳಲ್ಲಿ ಯುವಕರನ್ನು ಭೇಟಿ ಮಾಡಿ, ಸ್ವಾಭಿಮಾನಿ ಬಳಗದ ಧ್ಯೇಯೋದ್ದೇಶಗಳನ್ನು ತಿಳಿಸಿದ್ದಾರೆ. ಸ್ವಾಭಿಮಾನಿ ಬಳಗವನ್ನು ಮತ್ತಷ್ಟು ಸಂಘಟಿಸುವ ಪಣ ತೊಟ್ಟಿದ್ದಾರೆ.
ದಕ್ಷಿಣ ಕರ್ನಾಟಕದ ಕೋಲಾರಕ್ಕೆ ಈಗಾಗಲೇ ಭೇಟಿ ನೀಡಿದ್ದೇನೆ. ಕೆಲವು ಜಿಲ್ಲೆಗಳಲ್ಲಿ ಯುವಕರೇ ದೂರವಾಣಿ ಕರೆ ಮಾಡಿ ನಮ್ಮ ಜಿಲ್ಲೆಗೆ ಬನ್ನಿ, ನಿಮ್ಮಂಥ ನಿಸ್ವಾರ್ಥ ರಾಜಕಾರಣಿ ನಮಗೆ ಬೇಕು, ನಿಮ್ಮ ನೇತೃತ್ವದಲ್ಲೇ ಸಮಾಜಮುಖಿ ಕೆಲಸಗಳನ್ನು ಮಾಡಿ ರಾಜ್ಯದ ಶಿಕ್ಷಣ, ಆರೋಗ್ಯ, ರಸ್ತೆ, ಸ್ವಚ್ಛತೆ ಹೀಗೆ ಎಲ್ಲ ಕ್ಷೇತ್ರದಲ್ಲೂ ನಾವು ಕೆಲಸ ಮಾಡೋಣ ಎಂದು ಉತ್ಸುಕತೆ ತೋರಿದ್ದಾರೆ ಎನ್ನುತ್ತಾರೆ ಯುವ ರಾಜಕೀಯ ನೇತಾರ ಜಿ.ಬಿ. ವಿನಯ ಕುಮಾರ್.
ಆನ್ಲೈನ್ ತರಬೇತಿಯ ಟ್ರೆಂಡ್
ಐಎಎಸ್, ಐಪಿಎಸ್ ಪರೀಕ್ಷೆ ಬರೆಯುವವರು ಮನೆಯಲ್ಲೇ ಕುಳಿತು ಆನ್ಲೈನ್ನಲ್ಲಿ ತರಬೇತಿ ಪಡೆಯಬಹುದು ಎಂಬ ಟ್ರೆಂಡ್ ಅನ್ನು ವಿನಯ್ ಕುಮಾರ್ ಆರಂಭಿಸಿದರು. 2013-19ರ ಅವಧಿಯಲ್ಲಿ ಬಹಳಷ್ಟು ಬಡವರು, ಗೃಹಿಣಿಯರು, ನೌಕರರು ವೆಬ್ಸೈಟ್ ಮೂಲಕ ತರಬೇತಿಯನ್ನು ಉಚಿತವಾಗಿ ಪಡೆದಿದ್ದಾರೆ.
ರಾಜ್ಯದ ಅಭಿವೃದ್ಧಿಯಲ್ಲಿ ಯುವಕರು ಪಾಲ್ಗೊಳ್ಳಬೇಕು
ಹಣ ಹಾಕಿ ಅದರ ನೂರು ಪಟ್ಟು ಗಳಿಸಲು ರಾಜಕೀಯಕ್ಕೆ ಬರುತ್ತಾರೆ. ಕುಟುಂಬ ರಾಜಕಾರಣ, ಅತಿ ಭ್ರಷ್ಟಾಚಾರ ಹಾಗೂ ಇನ್ನಿತರ ಅನಾರೋಗ್ಯಕರ ವಾತಾವರಣ ರಾಜಕೀಯದಲ್ಲಿ ಇದೆ ಎಂಬ ಕಾರಣಕ್ಕೆ ಪ್ರತಿಭಾವಂತರು ರಾಜಕೀಯ ಎಂದರೆ ಸಾಕು ಎಂದು ಮೂಗು ಮುರಿಯುವಂತಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಯುವಕರನ್ನು ರಾಜಕಾರಣಕ್ಕೆ ಕರೆ ತಂದು ಅವರಿಗೂ ರಾಜಕೀಯ ಸ್ಥಾನಮಾನಗಳನ್ನು ಕೊಡಿಸಿ, ರಾಜ್ಯದ ಅಭಿವೃದ್ಧಿಯಲ್ಲಿ ಯುವಕರು ಪಾಲ್ಗೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಸ್ವಾಭಿಮಾನಿ ಬಳಗ ಕಟ್ಟಿರುವ ಜಿ.ಬಿ. ವಿನಯಕುಮಾರ್ ಅವರ ಸದುದ್ದೇಶಕ್ಕೆ ಮೆಚ್ಚಿ ಅವರ ಹಿಂದೆ ಸಹಸ್ರಾರು ಯುವಜನರು ಸರದಿಯಲ್ಲಿ ನಿಂತಿದ್ದಾರೆ.
ಮಿಷನ್ 100 ಗುರಿ
ಬ್ಲಾಗ್ನಲ್ಲಿ ದೇಶದ ಮೂಲೆ ಮೂಲೆಗಳಿಂದ ದೊರೆತ ಪ್ರತಿಕ್ರಿಯೆ ಇನ್ಸೈಟ್ಸ್ ಸಂಸ್ಥೆಯನ್ನು ಕಟ್ಟಲು ವಿನಯ್ ಕುಮಾರ್ ಅವರಿಗೆ ಆತ್ಮವಿಶ್ವಾಸ ತಂದುಕೊಟ್ಟಿತು. 2014 ರಿಂದ ಆಫ್ಲೈನ್ ತರಗತಿಗಳನ್ನು ಆರಂಭಿಸಿದರು. ಅಲ್ಲಿಂದ ಹಿಂತಿರುಗಿ ನೋಡಲಿಲ್ಲ.
ಮೊದಲ ಬ್ಯಾಚ್ನಲ್ಲಿ 5 ರ್ಯಾಂಕ್ಗಳು ಬಂದವು. ಅದರಲ್ಲಿ 4 ಮಂದಿ ಜಿಲ್ಲಾಧಿಕಾರಿ ಆದರು. ವರ್ಷದಿಂದ ವರ್ಷಕ್ಕೆ ರ್ಯಾಂಕ್ಗಳ ಪಟ್ಟಿ ಬೆಳೆಯುತ್ತ ಹೋಯಿತು. ಈಗ ಪ್ರತಿ ವರ್ಷ 200 ರ್ಯಾಂಕ್ಗಳು ಬರುತ್ತಿವೆ. 2023 ರಲ್ಲಿ ಈ ಸಂಸ್ಥೆಯ ಟಾಪರ್ಗಳ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.
ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ, ದೆಹಲಿ, ಹೈದರಾಬಾದ್, ಬೆಂಗಳೂರು, ದಾವಣಗೆರೆ ಮತ್ತು ಮಂಗಳೂರಿನಲ್ಲಿ ಇನ್ಸೈಟ್ಸ್ ಶಾಖೆಗಳಿವೆ. ಐಎಎಸ್ ತರಬೇತಿ ವಿಚಾರದಲ್ಲಿ ವಿನಯ್ ಕುಮಾರ್ ಕೇವಲ ಲಾಭದ ಬೆನ್ನು ಹತ್ತಿಲ್ಲ. ಸಾಮಾಜಿಕ ಕಳಕಳಿ ಇರುವುದರಿಂದ ಹಲವಾರು ಬಡ ವಿದ್ಯರ್ಥಿಗಳಿಗೆ ಉಚಿತ ತರಬೇತಿ ನೀಡಿದ್ದಾರೆ. ಮಣಿಪುರದಲ್ಲಿ ಗಲಭೆಯಾದಾಗ ಅಲ್ಲಿನ 150 ಮಕ್ಕಳಿಗೆ ಯುಪಿಎಸ್ಸಿ ಪರೀಕ್ಷೆಗೆ ಮಾರ್ಗದರ್ಶನ ಮಾಡಿದ್ದಾರೆ.
ಮಿಷನ್ 100 ಇದು ವಿನಯ್ ಅವರ ಮುಂದಿರುವ ಯೋಜನೆಯಾಗಿದೆ. ರಾಜ್ಯದಿಂದ ಪ್ರತಿ ವರ್ಷ 100 ಅಭ್ಯರ್ಥಿಗಳು ಯುಪಿಎಸ್ಸಿ ಟಾಪರ್ಗಳಾಗಬೇಕು ಎಂಬುದು ಅವರ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಯುವಜನರಿಗೆ ಅರಿವು ಮೂಡಿಸುತ್ತಿದ್ದಾರೆ.
ಐಎಎಸ್ ತರಬೇತಿ ನೀಡುವ ವಿಚಾರದಲ್ಲಿ ಲಾಭದ ಬೆನ್ನು ಬಿದ್ದಿಲ್ಲ. ಹಲವಾರು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಿದ್ದೇವೆ. ರಾಜ್ಯದಿಂದ ಪ್ರತಿ ವರ್ಷ 100 ಅಭ್ಯರ್ಥಿಗಳು ಯುಪಿಎಸ್ಸಿ ಟಾಪರ್ಗಳಾಗಬೇಕು ಎಂಬುದು ನನ್ನ ಅಪೇಕ್ಷೆ. ರಾಜಕೀಯದಲ್ಲಿ ಅನಾರೋಗ್ಯಕರ ವಾತಾವರಣವಿದೆ ಎಂಬ ಕಾರಣಕ್ಕೆ ಅನೇಕ ಪ್ರತಿಭಾವಂತರು ರಾಜಕೀಯ ಎಂದರೆ ಮೂಗು ಮುರಿಯುವಂತಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಯುವಕರನ್ನು ರಾಜಕಾರಣಕ್ಕೆ ಕರೆ ತಂದು ಅವರಿಗೂ ರಾಜಕೀಯ ಸ್ಥಾನಮಾನಗಳನ್ನು ಕೊಡಿಸಬೇಕಿದೆ. ರಾಜ್ಯದ ಅಭಿವೃದ್ಧಿಯಲ್ಲಿ ಯುವಕರು ಪಾಲ್ಗೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಸ್ವಾಭಿಮಾನಿ ಬಳಗ ಸ್ಥಾಪಿಸಲಾಗಿದೆ. ದೇಶದ ಅಭಿವೃದ್ಧಿಯೇ ನನ್ನ ಧ್ಯೇಯ. | ಜಿ.ಬಿ. ವಿನಯ್ ಕುಮಾರ್, ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ