ಐಎಎಸ್ ಪಾಸಾಗುವಂತೆ ಅನುಗ್ರಹಿಸು ತಾಯೆ!: ದೇವರಿಗೆ ಪತ್ರ ಬರೆದ ಅಧಿಕಾರಿ

HNL HALADAMMa 30
Published on

ಹೊನ್ನಾಳಿ: ಐಎಎಸ್ ಪಾಸಾಗುವಂತೆ ಅನುಗ್ರಹಿಸು ತಾಯೆ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಕೆಎಎಸ್ ಅಧಿಕಾರಿಯೊಬ್ಬರು ಬರೆದ ಪತ್ರವೊಂದು ಹುಂಡಿಯಲ್ಲಿ ದೊರೆತಿದೆ!

ತಾಲೂಕಿನ ಎ ಗ್ರೇಡ್ ದೇವಾಲಯಗಳಲ್ಲಿ ಒಂದಾದ ಮಾರಿಕೊಪ್ಪ ಗ್ರಾಮದ ಹಳದಮ್ಮ ದೇವಾಲಯದಲ್ಲಿ ಶನಿವಾರ ಹುಂಡಿ ಹಣ ಎಣಿಕೆ ವೇಳೆ ವಿವಿಧ ರೀತಿಯ ಪತ್ರಗಳು ದೊರೆತಿವೆ.

ನನಗೆ ಮೋಸ ಮಾಡಿದವರಿಗೆ ತಕ್ಕ ಶಾಸ್ತಿ ಆಗಬೇಕು, ಅವರ ಕನಸು, ಮನಸ್ಸಿನಲ್ಲೂ ನೀನು ಕಾಣಿಸಿಕೊಳ್ಳಬೇಡ, ಅವರು ಪರಸ್ಪರ ಜಗಳ ಮಾಡಿಕೊಂಡು, ಅವರ ಮನೆ ನಾಶವಾಗಬೇಕು. ಅವರೆಂದಿಗೂ ತಲೆ ಎತ್ತದಂತೆ ಮಾಡು ತಾಯಿ ಎಂದು ವಿನಂತಿಸಿಕೊಂಡು ಮತ್ತೊಬ್ಬ ಭಕ್ತ ವಿಚಿತ್ರವಾಗಿ ಪತ್ರ ಬರೆದಿದ್ದಾರೆ.

ಜತೆಗೆ ಹಿರೇಕೆರೂರಿನ ಮಡ್ಲಿ ದುರ್ಗಮ್ಮ, ಯಲ್ಲಮ್ಮ, ಉಕ್ಕಡಗಾತ್ರಿ ಕರಿಬಸವೇಶ್ವರ,ಧರ್ಮಸ್ಥಳ ಮಂಜುನಾಥ ಸ್ವಾಮಿ, ಶಿರಿಡಿ ಸಾಯಿಬಾಬಾ, ತಾಯಿ ರಾಜರಾಜೇಶ್ವರಿ ಸೇರಿ ಅನೇಕ ದೇವರ ಆಶೀರ್ವಾದ ಬೇಡಿರುವ ಪತ್ರಗಳು ಸಿಕ್ಕಿವೆ.

ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ 16.44 ಲಕ್ಷ ರೂ. ಸಂಗ್ರಹವಾಗಿದೆ. ಹಳದಮ್ಮ ದೇವಿಗೆ ಸೇರಿದ ಖಾತೆಯಲ್ಲಿ 90 ಲಕ್ಷ ಹಣ ಇದೆ. ಇದನ್ನು ಬಳಸಿಕೊಂಡು ದೇವಸ್ಥಾನದ ಅಭಿವೃದ್ಧಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ತಹಸೀಲ್ದಾರ್ ಜೆ.ಎಚ್.ರಶ್ಮಿ ತಿಳಿಸಿದ್ದಾರೆ.

ಹುಂಡಿ ಎಣಿಕೆ ವೇಳೆ ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ, ಮಾಜಿ ಅಧ್ಯಕ್ಷ ಚಿನ್ನಪ್ಪ, ಹಳದಪ್ಪ, ರೂಪಾ ಚನ್ನೇಶ್, ಎ.ಕೆ.ಹಳದಪ್ಪ, ತಿಮ್ಮಪ್ಪ, ಪ್ರಭುಗೌಡ, ಪ್ರಧಾನ ಅರ್ಚಕ ಮಲ್ಲಿಕಾರ್ಜುನ್, ರಾಜಸ್ವ ನಿರೀಕ್ಷಕ ಮುನ್ನೇಶ್, ದಿನೇಶ್, ನೇತ್ರಾವತಿ, ಕೆನರಾ ಬ್ಯಾಂಕ್ ಅಧಿಕಾರಿ ರಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net