ಗುಣಮಟ್ಟದ ಉತ್ಪನ್ನಗಳಿಂದ ದೇಶದ ಬೆಳವಣಿಗೆ; ಬಿಐಎಸ್‌ನಿಂದ ವಿಶ್ವ ಗುಣಮಟ್ಟ ದಿನಾಚರಣೆ

bis
Published on

ಬೆಂಗಳೂರು: ಗುಣಮಟ್ಟದ ಉತ್ಪನ್ನಗಳ ಹಿಂದೆ ದೇಶದ ಬೆಳವಣಿಗೆ ಅಡಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣದೀಪ ಚೌದರಿ ಹೇಳಿದ್ದಾರೆ.

ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಖಾಸಗಿ ಹೋಟೆಲ್‌ನಲ್ಲಿ ವಿಶ್ವ ಗುಣಮಟ್ಟದ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಮಾನಕ ಮಹೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜಾಗತಿಕ ಆರ್ಥಿಕ ಕ್ಷೇತ್ರದ ಬಲವರ್ಧನೆಗೆ ಪ್ರತಿಯೊಂದು ಉತ್ಪನ್ನಗಳ ಗುಣಮಟ್ಟ ಬಹಳ ಮುಖ್ಯ. ಈ ನಿಟ್ಟಿನಲ್ಲಿ ದೇಶದಲ್ಲಿ ಉತ್ಪಾನೆಯಾಗುವ ಪ್ರತಿಯೊಂದು ವಸ್ತುವಿನ ಗುಣಮಟ್ಟವನ್ನು ನಿರ್ಧರಿಸುವ ಬಿಐಎಸ್ ಕಾರ್ಯ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಣ ನೀಡಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಅನ್ಯಾಯವಾಗದಂತೆ ನಕಲಿ ವಸ್ತುಗಳನ್ನು ನಿಯಂತ್ರಿಸಿ, ಗುಣಮಟ್ಟದ ವಸ್ತುಗಳನ್ನು ಒದಗಿಸಿಕೊಡುವುದು ಒಂದು ಕಡೆಯಾದರೆ; ಆ ಮೂಲಕ ಸರ್ಕಾರಕ್ಕೆ ಪಾವತಿಯಾಗಬೇಕಾದ ತೆರಿಗೆ ವಂಚನೆಯಾಗದಂತೆ ಎಚ್ಚರಿಕೆ ವಹಿಸಬೇಕಾದ ಅಂಶವೂ ಇದರಲ್ಲಿದೆ. ಇದರಿಂದ ದೇಶದ ಅಭಿವೃದ್ಧಿಗೆ ಬಲ ಬರುತ್ತದೆ.

ಪ್ರತಿಯೊಂದು ವಸ್ತುವಿನ ಉತ್ಪಾದನೆ, ಸಾಗಾಟ ಮತ್ತು ವ್ಯಾಪಾರ ಈ ಮೂರೂ ಹಂತದಲ್ಲೂ ವಿಶ್ವದರ್ಜೆಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಯಶಸ್ವಿಯಾಗುವುದರ ಹಿಂದೆ ಕೂಡಾ ಐಎಸ್‌ಓ ಪಾತ್ರ ಗಮನಾರ್ಹ ಎಂದು ಚೌದರಿ ವಿವರಿಸಿದರು.

ಪ್ರತಿಯೊಂದು ವಸ್ತುವಿನ ಗುಣಮಟ್ಟದ ಪರೀಕ್ಷೆ ಮುಂದಿನ ಭವಿಷ್ಯಕ್ಕಾಗಿ ಅಗತ್ಯವಾಗಿದೆ. ದೇಶದ ಉತ್ಪನ್ನಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿರುವುದರ ಹಿಂದೆ ಐಎಸ್‌ಐ, ಐಎಸ್‌ಓ ಗುರುತು ಪ್ರಮುಖವಾಗಿದೆ ಎಂದು ಬಿನ್​ಬಿಓ ಮುಖ್ಯಸ್ಥ ವಿಜಯವೀರನ್.ಕೆ, ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಗುಣಮಟ್ಟದ ಉತ್ಪನ್ನಗಳ ಬಳಕೆ ಮತ್ತು ಜಾಗೃತಿ ಕುರಿತು ಬಿಎನ್‌ಬಿಎಲ್ ಮುಖ್ಯಸ್ಥೆ ಟಿ.ನಾಗಮಣಿ ಪ್ರತಿಜ್ಞಾ ವಿಧಿ ಬೋದಿಸಿದರು. ಇಸ್ರೋ ಹಿರಿಯ ವಿಜ್ಞಾನಿ ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು. ಗುಣಮಟ್ಟ ನಿರ್ಧರಿಸುವಲ್ಲಿ ಆರ್ಟಿಫಿಷಿಯಲ್ ಇಂಟೆಲೆಜೆನ್ಸಿ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ಗೋಷ್ಠಿಯಲ್ಲಿ ವಿಷಯ ತಜ್ಞರು ವಿಚಾರ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net