ಐಎಎಸ್‌ನಲ್ಲಿ ಕರ್ನಾಟಕದ ಹುಡುಗನಿಗೆ 31ನೇ ರ‍್ಯಾಂಕ್‌

IAS 31st Rank Kona Kartik
ಮಾವ ಶ್ರೀನಿವಾಸ ಮತ್ತು ಅತ್ತೆ ರಮಾದೇವಿಯೊಂದಿಗೆ ಹೈದರಾಬಾದ್‌ನಲ್ಲಿ ಸಂಭ್ರಮಿಸುತ್ತಿರುವ ಮಾನ್ವಿ ಪಟ್ಟಣದ ಕೋನಾ ಕಾರ್ತಿಕ್
Published on

ಮಾನ್ವಿ: ಪಟ್ಟಣದ ಕೋನಾ ವೆಂಕಟಸ್ವಾಮಿ-ಕೋನಾ ಉಮಾದೇವಿ ದಂಪತಿ ಪುತ್ರ ಕೋನಾ ಕಾರ್ತಿಕ್ ಅವರು ಐಇಎಸ್ ಪರೀಕ್ಷೆಯಲ್ಲಿ ದೇಶಕ್ಕೆ 31ನೇ ರ‍್ಯಾಂಕ್‌  ಪಡೆದು ಜಿಲ್ಲೆ ಮತ್ತು ರಾಜ್ಯದ ಕೀರ್ತಿ ತಂದಿದ್ದಾರೆ.

ವೆಂಕಟಸ್ವಾಮಿ ಸಿವಿಲ್ ಇಂಜಿನಿಯರ್ ಮತ್ತು ಗುತ್ತೇದಾರರಾಗಿದ್ದಾರೆ. ಇವರ ಮೊದಲ ಪುತ್ರ ಕಾರ್ತಿಕ್, ಚಿಕ್ಕಂದಿನಿಂದಲೇ ಹೈದರಾಬಾದ್‌ನಲ್ಲಿರುವ ಮಾವ ಶ್ರೀನಿವಾಸ ಮತ್ತು ಅತ್ತೆ ರಮಾದೇವಿ ಮನೆಯಲ್ಲಿ ಇದ್ದುಕೊಂಡು ಒಂದನೇ ತರಗತಿಯಿಂದ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. 10ನೇ ತರಗತಿ (ಶೇ.93.83) ಮತ್ತು ಪಿಯುಸಿಯಲ್ಲೂ (ಶೇ.98) ಉತ್ತಮ ಸಾಧನೆ ಮಾಡಿದ್ದಾರೆ. 2017 ರಲ್ಲಿ ಉಸ್ಮಾನಿಯ ವಿವಿಯ ಇಂಜಿನಿಯರಿಂಗ್‌ನಲ್ಲಿ ಪದವಿಯಲ್ಲಿ 9.01/10 ಅಂಕಗಳಿಸಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ಇಂಜಿನಿಯರಿಂಗ್ ಓದುವ ವೇಳೆ ಕಾರ್ತಿಕ್‌ಗೆ ಹೈದರಾಬಾದ್ ವಿಪ್ರೊ ಕಂಪನಿಯಲ್ಲಿ ಎರಡು ವರ್ಷ ದೊಡ್ಡಸಂಬಳದ ನೌಕರಿ ಮಾಡಿದ್ದರು. ನಂತರ ಯುಪಿಎಸ್‌ಸಿ ಪರೀಕ್ಷೆ ಬರೆದು ಐಇಎಸ್ ಪಾಸ್ ಮಾಡಬೇಕು ಎನ್ನುವ ಗುರಿಯೊಂದಿಗೆ ಹೈದರಾಬಾದ್‌ನಲ್ಲಿ ತರಬೇತಿ ಪಡೆದು, 2020ರ ಐಇಎಸ್ ಪರೀಕ್ಷೆ ಎದುರಿಸಿದ್ದ ಕಾರ್ತಿಕ್‌ಗೆ ಮೊದಲ ಹಂತದ ಪ್ರಯತ್ನದಲ್ಲೆ ದೇಶಕ್ಕೆ 31ನೇ ರ‍್ಯಾಂಕ್‌  ಲಭಿಸಿದೆ.

ಚಿಕ್ಕಂದಿನಿಂದಲೇ ಹೈದರಾಬಾದ್‌ನಲ್ಲಿರುವ ಮಾವನ ಮನೆಯಲ್ಲಿದ್ದು ಓದಿದ್ದೇನೆ. ನನ್ನ ಈ ಸಾಧನೆಗೆ ತಂದೆ-ತಾಯಿ ಮತ್ತು ಮಾವ-ಅತ್ತೆ ಸಹಕಾರ ನೀಡಿದ್ದಾರೆ. ರ‍್ಯಾಂಕ್‌ ಪಡೆವ ಭರವಸೆ ಇತ್ತು. 31ನೇ ರ‍್ಯಾಂಕ್‌  ಬಂದಿರುವುದು ಖುಷಿ ತಂದಿದೆ.
| ಕಾರ್ತಿಕ್ ಕೋನಾ

ಮಗನ ಸಾಧನೆ ಕೇಳಿ ಮನೆಯಲ್ಲಿ ಸಂಭ್ರಮಿಸಿದೆವು. ದೇಶಕ್ಕೆ 31 ನೇ ರ‍್ಯಾಂಕ್‌ ಬಂದಿದ್ದಾನೆ. ಮೊದಲಿಂದ ಕಷ್ಟಪಟ್ಟು ಓದಿದ್ದಾನೆ. ಅವನ ಸಾಧನೆಗೆ ಪ್ರತಿಫಲ ಸಿಕ್ಕಿದೆ. ವಿಪ್ರೊ ಕಂಪನಿಯಲ್ಲಿ ಉತ್ತಮ ಸಂಬಳ ಇತ್ತು. ಆದರೂ, ಐಇಎಸ್ ಪರೀಕ್ಷೆ ಬರೆಯುವ ಛಲ ಇಟ್ಟುಕೊಂಡು, ಅದನ್ನು ಸಾಧಿಸಿದ್ದಾನೆ.
| ಕೋನಾ ವೆಂಕಟಸ್ವಾಮಿ, ಕಾರ್ತಿಕ್ ತಂದೆ

ನಮ್ಮ ಮನೆಯಲ್ಲಿ ಇದ್ದುಕೊಂಡು ಐಇಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಸಂತೋಷವಾಗಿದೆ. ಐಇಎಸ್ ಪರೀಕ್ಷೆ ತರಬೇತಿಗೆ ಹೋದಾಗಿನಿಂದ ಅಭ್ಯಾಸ ಕಡೆ ಹೆಚ್ಚು ಗಮನ ಹರಿಸಿದ್ದರಿಂದ ರ‍್ಯಾಂಕ್‌  ಬಂದಿದೆ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದರೆ ಏನಾದರೂ ಸಾಧಿಸಬಹುದು ಎನ್ನುವುದಕ್ಕೆ ಕಾರ್ತಿಕ್ ಉದಾಹರಣೆ.
| ಶ್ರೀನಿವಾಸ್, ಕಾರ್ತಿಕ್ ಮಾವ, ಹೈದರಾಬಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net