

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ನೀತಿ, ಸಾಧಿಸಿರುವ ಪ್ರಗತಿ ಬಗ್ಗೆ ಸರಣಿ ಚರ್ಚೆ ನಡೆಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಯಾವಾಗ ಕರೆದರೂ ಭಾಗವಹಿಸಲು ನಾವು ರೆಡಿ ಇದ್ದೇವೆ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವಧಿಯಲ್ಲಿ ದೇಶದ ಸಾಲದ ಪ್ರಮಾಣ ಶೇ. 211ರಷ್ಟು ಏರಿಕೆಯಾಗಿದ್ದು ಯಾಕೆ? ಡಾಲರ್ ಎದುರು ರೂಪಾಯಿ ಅಪಮೌಲ್ಯಗೊಂಡಿದ್ದು ಯಾಕೆ? ದೇಶದಲ್ಲಿ 37 ಲಕ್ಷ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಇದಕ್ಕೆ ಯಾರು ಹೊಣೆ? ಮೇಕ್ ಇನ್ ಇಂಡಿಯಾ ಕಥೆ ಏನಾಗಿದೆ? ಇಂಥ ಮೂಲಭೂತ ಪ್ರಶ್ನೆಗಳಿಗೆ ಬಿಜೆಪಿಯವರು ಉತ್ತರ ಕೊಡಲಿ. ಪ್ರತಿ ವಾರ ಒಂದು ವಿಷಯದಂತೆ ಸರಣಿ ಚರ್ಚೆ ನಡೆಯಲಿ ಎಂದರು.
1947ರಿಂದ 2014ರವರೆಗೆ ದೇಶದ ಸಾಲ ಕೇವಲ 55 ಲಕ್ಷ ಕೋಟಿ ರೂ. ಇತ್ತು. ಕಳೆದ 10 ವರ್ಷಗಳ ಅವಧಿಯಲ್ಲಿ 165 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಇದನ್ನು ನಾವು ಹೇಳುತ್ತಿಲ್ಲ. ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಜನರಿಕ್ ಮೆಡಿಸಿನ್ ದರ ಹೆಚ್ಚಳವಾಗಿದೆ. ಈ ಬಗ್ಗೆ ಚರ್ಚೆ ನಡೆಯಬೇಕಲ್ಲ? ಚರ್ಚೆಯ ಸಂದರ್ಭದಲ್ಲಿ ನಮ್ಮ ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಅಲ್ಲಿ ಬಂದು ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದು ಬೇಡ ಎಂದರು.
ಕೋವಿಡ್ ಸಂದರ್ಭದಲ್ಲಿ ಪ್ರಧಾನಿಯವರು ಪ್ರತ್ಯೇಕ ಟ್ರಸ್ಟ್ ರಚಿಸಿಕೊಂಡು ಹಣ ಸಂಗ್ರಹಿಸಿದ್ದಾರೆ. ಪ್ರಧಾನ ಮಂತ್ರಿ ತುರ್ತು ಪರಿಹಾರ ನಿಧಿ ಇದ್ದಾಗಲೂ ಪ್ರತ್ಯೇಕ ಟ್ರಸ್ಟ್ ರಚಿಸುವ ಅಗತ್ಯವೇನಿತ್ತು. ಕೋವಿಡ್ ಸಂದರ್ಭದಲ್ಲಿ ಸಂಗ್ರಹಿಸಿದ್ದ 30 ಸಾವಿರ ಕೋಟಿ ರೂ. ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು. ನಾನು ವೈಯಕ್ತಿಕವಾಗಿ ಪ್ರಧಾನಿಯವರನ್ನಾಗಲಿ, ಸಚಿವ ಪ್ರಲ್ಹಾದ ಜೋಶಿಯವರನ್ನಾಗಿ ಬೈಯ್ದಿಲ್ಲ. ಮುಂದೆಯೂ ಬೈಯ್ಯುವುದಿಲ್ಲ. ನಾನು ಪ್ರಶ್ನೆ ಮಾಡುತ್ತಿದ್ದೇನೆ ಎಂದು ಹೇಳಿದರು.