ಸಾಯೋ ವಯಸ್ಸು ಬಂತು, ಅಲೆದು ಸುಸ್ತಾಗಿದ್ದೇನೆ, ಕೆಲಸ ಆಗುತ್ತೋ ಇಲ್ಲೋ ಹೇಳಿ ಬಿಡಿ ಎಂದು ಶಾಸಕರನ್ನೇ ಕೇಳಿದ ವೃದ್ಧ

15cbp5.jpg
Published on

ಚಿಕ್ಕಬಳ್ಳಾಪುರ: ಸಾಯೋ ವಯಸ್ಸು ಬಂದು ಬಿಟ್ಟಿದೆ. ಇಂತಹ ಸ್ಥಿತಿಯಲ್ಲೂ ಕಚೇರಿಗಳಿಗೆ ಅಲೆ ಅಲೆದು ಸುಸ್ತಾಗಿದ್ದೇನೆ, ಕೆಲಸ ಆಗುತ್ತದೆ ಎಂದರೆ ಹೇಳಿ, ಇಲ್ಲದಿದ್ದಲ್ಲಿ ಆಗಲ್ಲ ಎಂದಾದರೂ ಸರಿ, ಒಂದಂತೂ ಈಗಲೇ ಸ್ಪಷ್ಟಪಡಿಸಿ.
ಇವು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಭಾಗದಲ್ಲಿ ಶಾಸಕ ಪ್ರದಿಪ್ ಈಶ್ವರ್ ನೇತೃತ್ವದಲ್ಲಿ ಕೈಗೊಂಡಿದ್ದ ಗ್ರಾಮ ಸಂಚಾರ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ವೃದ್ಧ ಖಡಾ ಖಂಡಿತವಾಗಿ ಹೇಳಿದ ಮಾತು. ಇದಕ್ಕೆ ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಮುಖಂಡರು ಒಂದು ಕ್ಷಣ ಅವಕ್ಕಾದರು. ವೃದ್ಧನ ನೋವಿಗೆ ಧ್ವನಿಗೂಡಿಸಿದ ಶಾಸಕರು ಸಹ ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಲು ಖಡಕ್ ಸೂಚನೆ ನೀಡಿದರು.
8 ವರ್ಷಗಳಿಂದಲೂ ಕಚೇರಿಗೆ ಅಲೆಯಲಾಗುತ್ತಿದೆ. ಅರ್ಜಿ ಹಿಡಿದುಕೊಂಡು ಬಂದು ಹೇಳಿ ಹೇಳಿ ಸಾಕಾಗಿದೆ. ಯಾರೂ ಆಲಿಸುತ್ತಿಲ್ಲ. ಕೇವಲ ಸುಳ್ಳು ಭರವಸೆ ನೀಡಿ ವಾಪಸ್ ಕಳುಹಿಸುತ್ತಿದ್ದಾರೆ. ಇದರಿಂದ ರೋಸಿ ಹೋಗಿದ್ದೇನೆ. ಈಗಲಾದರೂ ಕೆಲಸ ಮುಗಿಸಿಕೊಡಲು ಆಗುತ್ತಾ ಇಲ್ಲವೇ ಆಗುವುದಿಲ್ಲವೇ? ಎನ್ನುವುದನ್ನು ಸ್ಪಷ್ಟಪಡಿಸಲಿ, ಉತ್ತರ ಕೇಳಿಕೊಂಡು ಸುಮ್ಮನಾಗುವೆ ಎಂದು ವೃದ್ಧ ಆಕ್ರೋಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಜನರು ವರ್ಷಾನುಗಟ್ಟಲೇ ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ. ಅರ್ಜಿಯನ್ನು ಪರಿಶೀಲಿಸಿ, ನಿಯಮಾನುಸಾರ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದರು.

*ಅಹವಾಲು ಸ್ವೀಕಾರ
ಹಲವು ವರ್ಷಗಳಿಂದಲೂ ಸಮಸ್ಯೆಗಳು ಬಗೆಹರಿಯದೇ ಜನರು ತೊಂದರೆ ಅನುಭವಿಸುತ್ತಿರುವುದನ್ನು ಅರಿತುಕೊಂಡು ಖುದ್ದು ಗ್ರಾಮ ಸಂಚಾರ ಹಾಗೂ ವಾರ್ಡುವಾರು ಭೇಟಿ ಅಭಿಯಾನವನ್ನು ಕೈಗೊಳ್ಳಲಾಗಿದೆ. ಪ್ರತಿ ಮನೆಗೂ ತೆರಳಿ ಅಹವಾಲುಗಳನ್ನು ಆಲಿಸಿ, ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ನಮ್ಮ ಊರಿಗೆ ನಮ್ಮ ಶಾಸಕರು, ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಸ್ತೆ, ಚರಂಡಿ ನಿರ್ಮಾಣ, ಸಾರಿಗೆ, ಮಾಸಾಶನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಖುದ್ದು ಜನರೇ ನೇರವಾಗಿ ಸಂವಾದದಲ್ಲಿ ಕುಳಿತು ಸಮಸ್ಯೆಗಳನ್ನು ಹೇಳಿಕೊಳ್ಳುವುದು ವಿಶೇಷ. ಇನ್ನೂ ಇದೇ ವೇಳೆ ಸ್ಥಳಿಯವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net