

ಚಿಕ್ಕಬಳ್ಳಾಪುರ: ನನಗೂ ಸಚಿವನಾಗುವ ಆಸೆ ಇದೆ. ಶ್ರೀ ಭೋಗನಂದೀಶ್ವರ ನಿರ್ಧರಿಸಿದರೆ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ನಡೆಯಲಿರುವ ನಂದಿ ಬೆಟ್ಟದಲ್ಲಿ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಸಚಿವನಾಗುವ ಆಸೆ ಇದ್ದರೆ ಏನು ತಪ್ಪು. ಈಗಾಗಲೇ ಡಾ ಎಂ.ಸಿ.ಸುಧಾಕರ್ ಸಚಿವರಾಗಿದ್ದಾರೆ. ನನಗಿಂತಲೂ ಹಿರಿಯ ಶಾಸಕರು ಎಸ್.ಎನ್.ಸುಬ್ಬಾರೆಡ್ಡಿ ಇದ್ದಾರೆ. ಯಾರಿಗೇ ಸೇವೆ ಒದಗಿಸುವ ಅವಕಾಶ ಸಿಕ್ಕಿದ್ದರೂ ಸಹ ಮೂವರು ಪರಸ್ಪರ ಸಹಕಾರ ಭಾವನೆಯೊಂದಿಗೆ ಒಗ್ಗಟ್ಟಿನಿಂದ ಇರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
*ಸಿಎಂಗೆ ಪಟ್ಟಿ ಸಲ್ಲಿಕೆ
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜಿಲ್ಲೆಯ ಸಮಸ್ಯೆಗಳ ಪರಿಹಾರ ಹಾಗೂ ನಿರೀಕ್ಷೆಯ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
೧೫೦ ಕೋಟಿ ರೂಪಾಯಿ ವೆಚ್ಚದ ಹೂವಿನ ಮಾರುಕಟ್ಟೆ, ನಂದಿ ಬೆಟ್ಟದಲ್ಲಿ ರೋಪ್ ವೇಗೆ ಅನುಮೋದನೆ, ಈ ಭಾಗದ ಜಕ್ಕಲಮಡು ಜಲಾಶಯದ ಅಣೆಕಟ್ಟೆಯ ಎತ್ತರವನ್ನು ಏರಿಸಿ, ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ನಂದಿ ಗಿರಿಧಾಮವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಶಿಫಾರಸು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಗಿದೆ ಎಂದರು.
ಇಲ್ಲಿನ ನಂದಿಗಿರಿಧಾಮವು ಅಂತಾರಾಷ್ಟ್ರೀಯ ಮಟ್ಟದ ಆಕರ್ಷಕ ಪ್ರವಾಸಿತಾಣ. ಇಲ್ಲಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಇಲ್ಲಿ ರಾಜಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿರುವ ಕಲೆ ಮತ್ತು ವಾಸ್ತುಶಿಲ್ಪದ ದೇಗುಲಗಳು, ಕೋಟೆ ಕೊತ್ತಲಗಳು, ಟಿಪ್ಪು ಡ್ರಾಪ್ ಹಾಗೂ ಬೆಟ್ಟದ ಮೆಟ್ಟಿಲು, ಪಂಚನದಿಗಳ ಉಗಮ ಸ್ಥಾನ, ಪ್ರಾಕೃತಿಕ ಸೊಬಗಿನ ತಾಣಗಳು ಇವೆ. ಇದಕ್ಕೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ನಂದಿ ಗಿರಿಧಾಮಕ್ಕೆ ಸ್ಥಾನ ನೀಡಿದರೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ವಿದೇಶಿಯರ ಗಮನ ಈ ಕಡೆಗೆ ಸೆಳೆದು ಬಂಡವಾಳ ಸಂಗ್ರಹಿಸಿ ಆಕರ್ಷಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖವಾಗಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಇತರ ಜಿಲ್ಲೆಗಳ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತು ವಿಶೇಷವಾಗಿ ಬೆಳಕು ಚೆಲ್ಲುವ ವಿಶ್ವಾಸವಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.