ನನ್ನ ಕಾರ್ಯಕರ್ತರ ತಂಟೆಗೆ ಬಂದರೆ ಸುಮ್ಮನಿರಲ್ಲ

BJP Leader Press Meet
Published on

ಮುಂಡಗೋಡ: ನಾನು ಯಾವುದೇ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗಳಿಗೆ, ಜೀವ ಬೆದರಿಕೆ ನೀಡಿಲ್ಲ ಎಂದು ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಲ್.ಟಿ.ಪಾಟೀಲ ಭಾನುವಾರ ಸ್ಪಷ್ಟಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ರಾತ್ರಿ ಶಾಸಕ ಶಿವರಾಮ ಹೆಬ್ಬಾರ ಹಾಗೂ ಬೆಂಬಲಿಗರು ಪತ್ರಿಕಾಗೋಷ್ಠಿಯಲ್ಲಿ ಎಲ್. ಟಿ. ಪಾಟೀಲ ಅವರು ಕಾಲಲ್ಲಿ ತುಳಿದು ಮೆಟ್ಟಿ ಕೊಲೆ ಮಾಡುತ್ತೇನೆ’ ಎನ್ನುವ ಶಬ್ಧ ಉಪಯೋಗಿಸಿದ್ದಾರೆ. ಅದು ಯಾರಿಗೆ ಹೇಳಿರುವುದು ಎಂದು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಎಲ್.ಟಿ. ಪಾಟೀಲ ಈ ಸ್ಪಷ್ಟೀಕರಣ ನೀಡಿದ್ದಾರೆ.

ಚಿಗಳ್ಳಿ ಸೊಸೈಟಿ ಚುನಾವಣೆಯಲ್ಲಿ ಅಜ್ಜಳ್ಳಿ ಹಾಗೂ ತುಂಬರಗಿ ಭಾಗದಿಂದ ಕಳೆದ ಬಾರಿ ಅವಿರೋಧ ಆಯ್ಕೆಯಾಗಿದ್ದೆ. ಆದರೆ ವ್ಯಕ್ತಿಯೊಬ್ಬ ಚುನಾವಣೆ ಎದುರಿಸುವುದಾಗಿ ಹೇಳಿದ್ದರಿಂದ ಪ್ರಾಮಾಣಿಕವಾಗಿ ನಮ್ಮ ಸೈನ್ಯ ಕಟ್ಟಿಕೊಂಡು ಚುನಾವಣೆ ಆರಂಭಿಸಿದೆವು. ಆದರೆ ಅವರು ನಮ್ಮ ಕಾರ್ಯಕರ್ತರಿಗೆ ಬಹಳ ತೊಂದರೆ ನೀಡಿದರು.

ಗೆದ್ದ ನಂತರ ನಮ್ಮ ಕಾರ್ಯಕರ್ತರು ವಿರೋಧ ಪಕ್ಷದವರು ನಿಮಗೆ ಬಹಳ ಕೆಟ್ಟದಾಗಿ ಮಾತನಾಡಿದ್ದಾರೆ. ಗುಂಡಿ ತೆಗೆದಿದ್ದೇವೆ ಮುಚ್ಚುವುದು ಬಾಕಿಯಿದೆ ಎಂದಿದ್ದಾರೆ. ಇನ್ನೂ ಕೆಲವರು ಚುನಾವಣಾ ಪಲಿತಾಂಶ ನಂತರ ಹುಲಿಯನ್ನು ಹೊಡೆಯುತ್ತೇವೆ. ಸಂಜೆ ನಂತರ ತುಂಬಿಕೊಂಡು ಹೋಗುತ್ತೇವೆ ಎಂದು ನಿಮ್ಮ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿದರು.

ಈ ಕಾರಣಕ್ಕಾಗಿ ಫಲಿತಾಂಶ ಬಂದ ನಂತರ ಅಜ್ಜಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ್ದೇನೆ ಆದರೆ ಜೀವ ಬೆದರಿಕೆ ಬಗ್ಗೆ ಯಾರು ಹೆಸರು ಪ್ರಸ್ತಾಪ ಮಾಡಿಲ್ಲ. ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ಮಾತ್ರ ನಾನು ಬಿಡುವುದಿಲ್ಲ ಎಂದು ಹೇಳಿದ್ದೇನೆ. ನಾನು ಮಾತನಾಡಿದ ವಿಡಿಯೋ ಅನ್ನು ಎಫ್.ಎಸ್.ಎಲ್ ಗೆ ಕಳಿಸುವ ಅಗತ್ಯವಿಲ್ಲ. ನನ್ನ ವಿರುದ್ಧ ಯಾರು ಮಾತನಾಡುತ್ತಾರೋ ಅವರಿಗೆ ಹೇಳಿದ್ದೇನೆ. ವಿಡಿಯೊದಲ್ಲಿ ನಾನೇ ಮಾತನಾಡಿರುವುದು ಎಂದು ಒಪ್ಪಿಕೊಳ್ಳುತ್ತೇನೆ ಎಂದರು.

ಕೆಡಿಸಿಸಿ ಬ್ಯಾಂಕಿಗೆ ನಿರ್ದೇಶಕ ನಾಗಿ ಗೆದ್ದು ಬರುತ್ತೇನೆ. ಜನರ ಆಶೀರ್ವಾದ ಇದ್ದರೆ ಹೆಬ್ಬಾರ ಅಲ್ಲ ಅವರಪ್ಪ ಬಂದ್ರು ತಡೆಯಲು ಆಗಲ್ಲ ಎಂಬ ಅರ್ಥದಲ್ಲಿ ಹೇಳಿದ್ದೇನೆ. ಆದರೆ ಹೆಬ್ಬಾರ ಅವರಿಗೆ ಬೇರೆ ಅರ್ಥದಲ್ಲಿ ನಾನು ಹೇಳಿಲ್ಲ. ಈ ಹಿಂದೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾದ ನನ್ನ ವಿರುದ್ಧ ಮತ್ತೊಬ್ಬರನ್ನು ನಿಲ್ಲಿಸಿ ನನ್ನ ಸೋಲಿಸಲು ಪ್ರಯತ್ನಿಸಿದರು.

ಹೆಬ್ಬಾರ ಅವರು ವಿಧಾನ ಸಭಾ ಚುನಾವಣೆಯಲ್ಲಿ ಎರಡು ಬಾರಿ ಚುನಾವಣೆ ನಿಂತಾಗ . ಕೆಲವು ಮುಖಂಡರು ಅವರ ಜತೆ ಇದ್ದವರೇ ಬೇರೆವರ ಜತೆ ಕೈಜೋಡಿಸಿ ಸೋಲಿಸಲು ಪ್ರಯತ್ನಸಿದರು. ಆದರೆ ನಾನು ನಮ್ಮ ಕಾರ್ಯಕರ್ತರ ಜೋತೆಗೂಡಿ ಹೆಬ್ಬಾರ ಗೆಲುವಿಗೆ ಪ್ರಾಮಾಣಿಕ ಕೆಲಸ ಮಾಡಿ ಗೆಲ್ಲಿಸಿದ್ದೇವೆ. ಈ ಬಗ್ಗೆ ಅವರಿಗೆ ಕೃತಜ್ಞತೆ ಭಾವನೆ ಇರಬೇಕಿತ್ತು ಎಂದರು.

ನಾನು ಆಧ್ಯಾತ್ಮಕ ಹಿನ್ನೆಲೆಯುಳ್ಳ ಕುಟುಂಬದಿಂದ ಬೆಳೆದು ಬಂದವನು. ರೈತನಾಗಿ ಜನರ ಆಶೀರ್ವಾದದಿಂದ ರಾಜಕೀಯದಲ್ಲಿದ್ದೇನೆ. ನಮ್ಮ ಮನೆಯ ಮುಂದೆ ಶ್ರೀರಾಮ ಮಂದಿರ ಕಟ್ಟಿಸಿ, ನಿತ್ಯವೂ ಪೂಜಿಸುತ್ತೇವೆ. ನನ್ನ ಸಂಸ್ಕಾರದ ಬಗ್ಗೆ ಮಾತನಾಡುವ ಅಗತ್ಯ ಹೆಬ್ಬಾರ ಅವರಿಗೆ ಇಲ್ಲ ಎಂದು ಹೇಳಿದರು.

ಈ ವೇಳೆ ಅಶೋಕ ಚಲವಾದಿ, ಪಿ.ಜಿ.ತಂಗಚ್ಚನ್, ಮಂಜುನಾಥ ಪಾಟೀಲ,ಬಸವರಾಜ ತನಿಖೇದಾರ್, ನಾಗರಾಜ ಸಂಕನಾಳ,ದೇವೇಂದ್ರ ಕೇಂಜೋನ್ನವರ,ಮಂಜುನಾಥ ನಡಗೇರಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net