ಎರಡು ಲಕ್ಷ ಮತಗಳ ಅಂತರದಿಂದ ಗೆಲುತ್ತೇನೆ: ಸಂಸದ ಪ್ರತಾಪ್ ಸಿಂಹ ಹೇಳಿಕೆ

BJP- pratap simha
Published on

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಕಾಂಗ್ರೆಸ್‌ನಿಂದ ಯಾವುದೇ ಅಭ್ಯರ್ಥಿ ನಿಂತರೂ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಒಂಥರಾ ಎಲ್ಲ ಪಕ್ಷಗಳ ಮತದಾರರ ಅಭ್ಯರ್ಥಿ ಇದ್ದಂತೆ. ಎಲ್ಲ ಪಕ್ಷದಲ್ಲೂ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳಿದ್ದಾರೆ. ಅವರೆಲ್ಲರೂ ನನಗೆ ಮತ ಹಾಕುತ್ತಾರೆ. ಈಗ ಜೆಡಿಎಸ್ ಕೂಡ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ನಮಗೆ ಹೆಚ್ಚಿನ ಬಲ ಬಂದಿದೆ ಎಂದು ತಿಳಿಸಿದರು.


ಸಂಸದ ಪ್ರತಾಪ್ ಸಿಂಹ ಹೆಸರಿನ ಇಂಗ್ಲಿಷ್‌ನ ಅಕ್ಷರಗಳ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಸಂಖ್ಯಾಶಾಸ್ತ್ರ ಅಂತೇನೂ ಅಲ್ಲ. ನೀವು ಸಂಖ್ಯೆಶಾಸ್ತ್ರ ಅಂದರೆ ಅದು ಸಂಖ್ಯೆಶಾಸ್ತ್ರ ಅಷ್ಟೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಹೆಸರು ಬರೆಯುವಾಗ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಕನ್ನಡದಲ್ಲಿ ಹೆಸರು ಇರುವಂತೆ ಯಥಾವತ್ತಾಗಿ ಇಂಗ್ಲಿಷ್‌ನಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ ಅಷ್ಟೇ ಎಂದರು.


ಈ ಬದಲಾವಣೆಗೂ ಚುನಾವಣೆಗೂ ಸಂಬಂಧ ಇಲ್ಲ. ಅದೇ ಹೆಸರಿನಿಂದಲೇ ನಾನು ಎರಡು ಬಾರಿ ಗೆದ್ದಿದ್ದೇನೆ. ಮೈಸೂರೇ ಗೊತ್ತಿಲ್ಲದ ನನಗೆ ಮೊದಲ ಬಾರಿ ಮೈಸೂರಿನ ಜನರು ಗೆಲ್ಲಿಸಿದರು. ಎರಡನೇ ಬಾರಿಯೂ ನನ್ನನ್ನು ಇಲ್ಲಿನ ಜನರು ಗೆಲ್ಲಿಸಿದ್ದಾರೆ. ಹೀಗಾಗಿ ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ ಎಂದು ತಿಳಿಸಿದರು.


ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೈಸೂರು ಸೇರಿದಂತೆ ಮೂರು ಜಿಲ್ಲೆಗಳಿಗೆ ಇದು ವಿಸ್ತರಿಸಿದೆ. ಹೀಗಾಗಿ, ಮೈಸೂರು ನಗರ ಪೊಲೀಸರು ಇದರ ತನಿಖೆ ನಡೆಸುವುದಿಲ್ಲ. ರಾಜ್ಯ ಪೊಲೀಸ್ ಇಲಾಖೆ ಇದರ ತನಿಖೆ ನಡೆಸುತ್ತದೆ. ಪೊಲೀಸರು ಆದಷ್ಟು ಬೇಗ ತನಿಖೆ ಕೈಗೆತ್ತಿಕೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net