ಉಸಿರಿರುವವರೆಗೂ ಜನಸೇವೆ ಮಾಡುವೆ

cc patil
Published on

ನರಗುಂದ: ಪಟ್ಟಣದ ಕೆಂಪಗಸಿ ಬಡಾವಣೆಯಿಂದ ಗಾಂಧಿಚೌಕ್, ಸೋಮಾಪೂರ, ಜಮಾದಾರ ಪ್ಲಾಟ್, ಜಮಲಾಪೂರ, ಪಠಾಣ ಓಣಿ, ಅಳಿಯ ನಗರದ ಆಯ್ದ ಭಾಗಗಳಲ್ಲಿ ಶಾಸಕ ಸಿ.ಸಿ. ಪಾಟೀಲ ಅವರು ಗುರುವಾರ 80 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು ‘ನಾನು ಲೋಕೋಪಯೋಗಿ ಸಚಿವನಾಗಿದ್ದಾಗ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಲಾಖೆಯಿಂದ 80 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿರಲಿಲ್ಲ. ಆದರೀಗ ಚುನಾವಣೆಯಲ್ಲಿ ಮತದಾರರು ನನಗೆ ಮತ್ತೆ ಜನಾಶೀರ್ವಾದ ಮಾಡಿದ್ದಾರೆ. ಹೀಗಾಗಿ ನನ್ನ ಮೊಣಕಾಲು ಶಸ್ತ್ರಚಿಕಿತ್ಸೆಯ ನೋವಿನಲ್ಲೂ ಅಭಿವೃದ್ಧಿ ಕಾಮಗಾರಿಗಳಿಗೆ ಮುಂದಡಿ ಇಟ್ಟಿದ್ದೇನೆ. ನನ್ನ ಗುರಿ ಒಂದೇ. ಅದು ಮತಕ್ಷೇತ್ರದ ಜನತೆಗಾಗಿ ಉಸಿರಿರುವವರೆಗೂ ಸರ್ವ ವಿಧದಲ್ಲಿ ಕೆಲಸ ಮಾಡುವುದು. ಇದು ನನ್ನ ದೃಢ ನಿರ್ಧಾರ. ಇದನ್ನು ಯಾವಾಗಲೂ ಮುಂದುವರಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದರು.

ನೋವಿನಲ್ಲೂ ಸಮಾಜ ಕಾರ್ಯ: ಶಾಸಕ ಸಿ.ಸಿ. ಪಾಟೀಲ ಅವರು ಮೊಣಕಾಲು ಶಸ್ತ್ರ ಚಿಕಿತ್ಸೆಗೊಳಗಾಗಿದ್ದರೂ ಊರುಗೋಲು ಸಹಾಯದಿಂದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಪುರಸಭೆ ಮಾಜಿ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಹನುಮಂತ ಹವಾಲ್ದಾರ, ಗುತ್ತೆಗೆದಾರ ರಾಮಪ್ಪ ದೊಡಮನಿ, ಪ್ರಕಾಶ ಪಟ್ಟಣಶೆಟ್ಟಿ, ಸಂಗಪ್ಪ ಪೂಜಾರ, ವಸಂತ ಜೋಗಣ್ಣವರ. ಚನ್ನು ನಂದಿ, ಸುನೀಲ್ ಕುಷ್ಟಗಿ, ಸಂಭಾಜಿ ಕಾಶೀದ, ಜಿನ್ನಾಸಾಬ ಮುಲ್ಲಾನವರ, ಸಿದ್ದಪ್ಪ ಯಲಿಗಾರ, ಅಜ್ಜುಗೌಡ ಪಾಟೀಲ, ಚಂದ್ರಶೇಖರ ಕೋಟಿ, ವಿಠಲ ಹವಾಲ್ದಾರ, ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಮಂಜು ಮೆಣಸಗಿ, ಸಿದ್ದೇಶ ಹೂಗಾರ, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಂಗಮೇಶ ಚರಂತಿಮಠ, ಚಂದ್ರಗೌಡ ಪಾಟೀಲ, ಮಹೇಶ ಹಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net