

ಪಕ್ಷದಲ್ಲಿ ಹಲವಾರು ಬೆಳವಣಿಗೆಗಳನ್ನು ನೋಡಿದ್ದೇನೆ. ನೋಟಿಸ್ ಬಂದಿದ್ದರಿಂದ ವಿಚಲಿತನಾಗಿಲ್ಲ. ಯಾವುದಕ್ಕೂ ಹೆದರುವ ಮಾತೇ ಇಲ್ಲ ಎಂದು ಮಾಜಿ ಶಾಸಕ ವಾಸು ಗುಡುಗಿದರು.
ನಗರದ ಲಲಿತಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸೋಮವಾರ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಯಾರು ಬೇಕಾದರೂ ಪೊಲೀಸ್ ಠಾಣೆಗೆ ದೂರು ನೀಡಬಹುದು. ಅದರಲ್ಲಿ ತಪ್ಪೇನಿಲ್ಲ. ಚಾರ್ಚ್‌ಶೀಟ್ ಹಾಕಿದ ಮೇಲೆ ಏನಿದೆ ಅಂತ ಗೊತ್ತಾಗುತ್ತದೆ. ಅದೇ ರೀತಿ ಹೈಕಮಾಂಡ್‌ಗೆ ಯಾರೋ ಒಂದಿಬ್ಬರು ದೂರು ನೀಡಿದ್ದಾರೆ. ನಿಮ್ಮ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ದೂರು ಬಂದಿದೆ. ಇದಕ್ಕೆ ಉತ್ತರ ಕೊಡಿ ಅಂತ ಪತ್ರ ಬಂದಿದೆ. ನನಗೆ ಯಾವ ವಿಷಯದ ಮೇಲೆ ದೂರು ಕೊಡಲಾಗಿದೆ ಎಂಬುದು ಗೊತ್ತಿಲ್ಲ. ಅದರ ಪ್ರತಿ ಕೈ ಸೇರಿದ ಮೇಲೆ ಉತ್ತರ ಕೊಡುತ್ತೇನೆ ಎಂದು ಹೇಳಿದರು.
ನನ್ನ ವಿರುದ್ಧ ದೂರು ಕೊಟ್ಟಿರುವವರ ಹಿಂದೆ ಯಾರಿದ್ದಾರೆಂದು ನನಗೆ ಗೊತ್ತಿಲ್ಲ. ನನಗಿಂತ ನಿಮಗೆ ಗೊತ್ತಿರಬಹುದು. ನೀವು ರೀಸರ್ಚ್ ಮಾಡಿದರೆ ತಿಳಿಯಲಿದೆ. ನಾನು ಯಾವುದಕ್ಕೂ ಹೆದರಲ್ಲ. ಮನೆಯಲ್ಲಿ ಕೂರಲೂ ಸಿದ್ಧ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲೂ ಸಿದ್ಧ. ಕಳೆದ 45 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಅನೇಕ ವಿಚಾರಗಳನ್ನು ನೋಡಿದ್ದೇನೆ. ಸಮಯ ಬಂದಾಗ ಮಾತನಾಡುವೆ ಎಂದು ಎದುರಾಳಿಗಳಿಗೆ ತಿರುಗೇಟು ನೀಡಿದರು.