

ದೊಡ್ಡಬಳ್ಳಾಪುರ : ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಲಕ್ಕೇನಹಳ್ಳಿಯಲ್ಲಿ ಡ್ಯಾಂ ನಿರ್ಮಾಣವಾದರೆ ಡ್ಯಾಂ ಸುತ್ತಮುತ್ತ ಇರುವ ಕೆಲ ಗ್ರಾಮಗಳು ಮುಳುಗಡೆಯಾಗುತ್ತವೆ. ಮುಳುಗಡೆಯಾಗುವ ಹಳ್ಳಿಗಳಲ್ಲಿ ಜನರು ವಾಸ ಮಾಡಲು ಆಗುವುದಿಲ್ಲ. ಹಾಗಾಗಿ ಈ ಹಳ್ಳಿಗಳ ಜನರಿಗಾಗಿ ಪರ್ಯಾಯವಾಗಿ ಹೊಸ ಹಳ್ಳಿ ಸೃಷ್ಟಿಸಿ ಮನೆ, ಜಮೀನು ನೀಡುತ್ತೇವೆ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಸರ್ಕಾರ ತಿಳಿಸಿದೆ. ಆದರೆ, ಸಾಸಲು ಹೋಬಳಿಯ ಲಕ್ಕೇನಹಳ್ಳಿ ಭಾಗದಲ್ಲಿ ಎತ್ತಿನಹೊಳೆ ಜಲಾಶಯ ನಿರ್ಮಾಣಕ್ಕೆ ಈ ಭಾಗದ ರೈತರು, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಲಕ್ಕೇನಹಳ್ಳಿಯಲ್ಲಿ ಸೋಮವಾರ ಸಭೆ ನಡೆಸಿ ಒಕ್ಕೊರಲ ತೀರ್ಮಾನಕ್ಕೆ ಬಂದಿದ್ದು, ಹುಟ್ಟಿ ಬೆಳೆದ ಊರು ಬಿಟ್ಟು ಕೊಡಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಮುಖಂಡ ಲಕ್ಕಣ್ಣ ಮಾತನಾಡಿ, ಸರ್ಕಾರದ ಈ ನಿರ್ಧಾರಕ್ಕೆ ಇಲ್ಲಿನ ರೈತರು, ನಿವಾಸಿಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮಗೆ ಸರ್ಕಾರ ನೀಡುವ ಅಂಗೈ ಅಗಲ ಭೂಮಿ, ಮನೆ ಬೇಡ. ನಮ್ಮ ನಮ್ಮ ಹಳ್ಳಿಗಳಲ್ಲೇ ನಾವು ವಾಸ ಮಾಡುತ್ತೇವೆ. ನಮ್ಮ ಜಮೀನಿನಲ್ಲೇ ಉತ್ತಿ ಬಿತ್ತು ಬೆಳೆ ಬೆಳೆದು ಜೀವನ ಸಾಗಿಸುತ್ತೇವೆ. ನಾವು ಹುಟ್ಟಿ ಬೆಳೆದ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ. ಜಲಾಶಯದ ಬದಲಾಗಿ ಪೈಪ್ ಲೈನ್ ಕಾಮಗಾರಿ ಮಾಡಿ ಎಂದರು.
ಜೀವನ ನಾಶ ಮಾಡ್ಬೇಡಿ : ಸಾಸಲು ಹೋಬಳಿಯಲ್ಲಿ ಹೆಚ್ಚಾಗಿ ಭೂಮಿ ತಾಯಿಯನ್ನು ನಂಬಿ ಬದುಕುತ್ತಿದ್ದೇವೆ. ನಮಗೆ ವ್ಯವಸಾಯ ಬಿಟ್ಟರೆ ಬೇರೇನೂ ಬರುವುದಿಲ್ಲ. ಸುಮಾರು 10 ಕೋಟಿಗೂ ಹೆಚ್ಚು ವಹಿವಾಟಿನ ಅಡಕೆ ಬೆಳೆ ಬೆಳೆಯುತ್ತೇವೆ. ಇಂಥ ಸನ್ನಿವೇಶದಲ್ಲಿ ಇಲ್ಲಿ ಡ್ಯಾಂ ನಿರ್ಮಾಣ ಮಾಡಿ ನಮ್ಮ ಬದುಕನ್ನು ನಾಶ ಮಾಡಲು ಸರ್ಕಾರ ಮುಂದಾಗಿದೆ ಎಂದು ಮುಖಂಡ ರಾಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಬದುಕಿಗೆ ಕೊಳ್ಳಿ ಇಡಬೇಡಿ : ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧವಿಲ್ಲ. ಲಕ್ಕೇನಹಳ್ಳಿಯಲ್ಲಿ ಡ್ಯಾಂ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿದೆ. ನಮ್ಮ ಪ್ರಾಣವಾದರೂ ಬಿಡುತ್ತೇವೆ, ಡ್ಯಾಂ ನಿರ್ಮಾಣ ಮಾಡುವುದಕ್ಕೆ ಬಿಡುವುದಿಲ್ಲ. ದಯವಿಟ್ಟು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬೇಡಿ, ನಮಗೆ ಪರಿಹಾರ ಬೇಡ, ನಮಗೆ ನಮ್ಮ ಬದುಕು ಮುಖ್ಯ. ಹಾಗಾಗಿ ಇಲ್ಲಿ ಡ್ಯಾಂ ನಿರ್ಮಾಣ ಮಾಡಿ ನಮ್ಮ ಬದುಕಿಗೆ ಕೊಳ್ಳಿ ಇಡಬೇಡಿ ಎಂದು ರೈತ ಪ್ರಸನ್ನ ಮನವಿ ಮಾಡಿದರು. ಜೂ.21ರಂದು ದೊಡ್ಡಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಉದ್ದೇಶಿತ ಜಲಾಶಯ ನಿರ್ಮಾಣ ಕಾಮಗಾರಿಗಳ ಸ್ಥಳವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪರಿಶೀಲನೆ ನಡೆಸಿ, ಇದೇ ವೇಳೆ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಅವರು ಹೇಳಿದ ಮಾತುಗಳನ್ನು ನಾವು ಕೇಳಿದ್ದೇವೆ ಅಷ್ಟೆ. ನಮ್ಮ ಮಾತು, ನಮ್ಮ ಅಹವಾಲು ಸ್ವೀಕರಿಸದೇ ಸಭೆಯನ್ನು ಮುಕ್ತಾಯಗೊಳಿಸಿ ಹೊರಟು ಹೋದರು ಎಂದು ದೂರಿದರು.