

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇನ್ನು 8-10 ದಿನಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಆ ಚುನಾವಣೆಯಲ್ಲಿ ಗೆದ್ದು ಮತ್ತೆ ರಾಜ್ಯಾಧ್ಯಕ್ಷ ಸ್ಥಾನದಲ್ಲೇ ಮುಂದುವರಿಯಲಿದ್ದೇನೆ ಎಂದು ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಬಳಿಕ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಬಹುಶಃ ನಮ್ಮ ಪಕ್ಷದಂತೆ ಬೇರೆ ಯಾವ ರಾಜಕೀಯ ಪಕ್ಷದಲ್ಲೂ ಇಷ್ಟೊಂದು ವ್ಯವಸ್ಥಿತವಾಗಿ ಸಂಘಟನೆಯ ಚುನಾವಣೆ ನಡೆಯುವುದಿಲ್ಲ ಎಂದು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಡಲ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ವ್ಯವಸ್ಥಿತವಾಗಿ ವರಿಷ್ಠರು ನಿರ್ಧಾರ ಮಾಡಿದಂತೆ ನಡೆಯುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಪಕ್ಷದ ಹಿರಿಯರು, ಕಾರ್ಯಕರ್ತರೆಲ್ಲ ಒಟ್ಟಾಗಿ ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ನಾನು ಯಾವ ರೀತಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನಿರ್ವಹಣೆ ಮಾಡಿದ್ದೇನೆಂದು ರಾಜ್ಯದ ಜನರು, ಪಕ್ಷದ ಶಾಸಕರು, ಹಿರಿಯರು ಗಮನಿಸಿದ್ದಾರೆ ಎಂದರು.
ಜಿಲ್ಲಾಧ್ಯಕ್ಷರ ಚುನಾವಣೆಯಲ್ಲಿ ಹೆಚ್ಚಿನ ಪೈಪೋಟಿ ಇತ್ತು. ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೂ ಸ್ಪರ್ಧೆ ಏರ್ಪಡುವ ಲಕ್ಷಣಗಳಿವೆ. ಪಕ್ಷಕ್ಕೆ ಈಗಾಗಲೇ ಸಾಕಷ್ಟು ಹಾನಿಯಾಗಿದೆ. ಶೀಘ್ರದಲ್ಲೇ ಎಲ್ಲವೂ ಸರಿಹೋಗುವ ನಿರೀಕ್ಷೆಯಿದೆ. ಕಳೆದ ಒಂದು ವರ್ಷದಿಂದ ನಾನು ನಮ್ಮ ನಾಯಕರು ಹಾಗೂ ಪಕ್ಷದ ವಿರುದ್ಧ ಹೇಳಿಕೆ ನೀಡಿಲ್ಲ. ನನ್ನ ಸ್ಥಾನದ ಕರ್ತವ್ಯದ ಬಗ್ಗೆ ಅರಿವಿದೆ ಎಂದು ಹೇಳಿದರು.