

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸತತ ಮಳೆಯಿಂದ ರಾಜ್ಯದ ವಿವಿಧೆಡೆ ಅಪಾರ ಹಾನಿ ಸಂಭವಿಸಿದರೂ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರಾಗಲಿ ಇಲ್ಲಿಯವರೆಗೂ ಸ್ಥಳ ಪರಿಶೀಲನೆ ನಡೆಸದಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಹಾನಿ ಬಗ್ಗೆ ಕಂದಾಯ ಸಚಿವರು ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ್ದಾರೆ ಎಂದು ಕೇಳಿದ್ದೇನೆ. ವಿಡಿಯೋ ಸಂವಾದ ನಡೆಸುವುದು ಬೇರೆ. ಸ್ಥಳ ಪರಿಶೀಲನೆ ಮಾಡಿ ಜನರಿಗೆ ಧೈರ್ಯ ತುಂಬುವುದು ಬೇರೆ. ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ಏನೇ ಇರಲಿ ಇಂಥ ಸಂದರ್ಭದಲ್ಲೂ ಸ್ಥಳ ಪರಿಶೀಲನೆ ಮಾಡುವ ಕೆಲಸ ಯಾರಿಂದಲೂ ಆಗಿಲ್ಲ. ಇದು ಈ ಸರ್ಕಾರಕ್ಕೆ ಜನರ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿ ಇದೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಆಡಳಿತ ಹೇಗೆ ನಡೆಸುವುದು ಎಂಬುದನ್ನು ರಾಜ್ಯ ಸರ್ಕಾರವೇ ಮರೆತಂತೆ ಕಾಣುತ್ತಿದೆ. ರಾಜ್ಯದಲ್ಲಿ ನಡೆದಿರುವ ಅಕ್ರಮ, ಹಗರಣಗಳ ಹಿನ್ನೆಲೆಯಲ್ಲಿ ಜನರ ಮುಂದೆ ಹೋಗಲು ಆಗದಂತ ವಾತಾವರಣದಲ್ಲಿ ಸಿಎಂ ಇದ್ದಾರೆ ಎಂದು ನನಗೆ ಅನಿಸುತ್ತಿದೆ. ಭಾನುವಾರ ಸಕಲೇಶಪುರಕ್ಕೆ ಭೇಟಿ ನೀಡಿ ಅಲ್ಲಿ ಮಳೆಯಿಂದ ಆಗಿರುವ ಹಾನಿಗಳ ಬಗ್ಗೆ ಪರಿಶೀಲನೆ ನಡೆಸಲಿದ್ದೇವೆ ಎಂದು ಹೇಳಿದರು.
ತನಿಖೆಯ ಗುಮ್ಮ
ಬಿಜೆಪಿ ಸರ್ಕಾರದ ಅವಧಿಯಲ್ಲಿ 21 ಅಕ್ರಮ ಮತ್ತು ಹಗರಣಗಳು ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುತ್ತೇವೆ, ಎಲ್ಲರನ್ನೂ ಜೈಲಿಗೆ ಕಳುಹಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರಲ್ಲಿ 2010ರಿಂದ ನಡೆದಿರುವ ಹಗರಣಗಳ ಬಗ್ಗೆ ಉಲ್ಲೇಖವಿದೆ. ಹಾಗಿದ್ದರೆ, 2013ರಿಂದ 2018ರವರೆಗೆ ಇವರೇ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು ? ಯಾಕೆ ಆಗ ಕ್ರಮ ಕೈಗೊಳ್ಳಲಿಲ್ಲ? ಕಳೆದ ಒಂದು ವರ್ಷದಿಂದ ಅಧಿಕಾರದಲ್ಲಿ ಇದ್ದರೂ ಸುಮ್ಮನೆ ಇದ್ದಿದ್ದು ಯಾಕೆ ? ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕಲು ಸಿದ್ದರಾಮಯ್ಯ ಅವರು ವಿಪಕ್ಷಗಳ ಮೇಲೆ ತನಿಖೆಯ ಗುಮ್ಮ ಬಿಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.