

ಸಿಂಧನೂರು (ರಾಯಚೂರು): ಜಾತಿ ಗಣತಿ ನಡೆಸಿದ ಸಂದರ್ಭದಲ್ಲಿ ನನ್ನನ್ನು ಕೇಳಿಲ್ಲ ಎಂದು ಸಿದ್ಧಗಂಗಾ ಶ್ರೀಗಳು ಹೇಳಿದ್ದಾರೆ. ಅದರಂತೆ ನನ್ನನ್ನು ಕೂಡಾ ಗಣತಿ ಮಾಡುವವರು ಸಂಪರ್ಕಿಸಿಲ್ಲ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಗಣತಿ ಸಂದರ್ಭದಲ್ಲಿ ನಮ್ಮನ್ನು ಕೇಳಿಲ್ಲ ಎಂದು ಹೇಳುವವರು ಎಷ್ಟು ಜನರಿದ್ದಾರೆ, ಅವರ ಸಂಖ್ಯೆ ಎಷ್ಟು ಎನ್ನುವುದು ಗೊತ್ತಾದರೆ ವರದಿ ವೈಜ್ಞಾನಿಕ, ಅವೈಜ್ಞಾನಿಕ ಎಂದು ಗೊತ್ತಾಗುತ್ತದೆ ಎಂದರು.
ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆ ವರದಿಯನ್ನು ಮುಖ್ಯಮಂತ್ರಿಗಳಿಗೆ ಒಪ್ಪಿಸಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕೆ, ಬೇಡವೇ ಎನ್ನುವುದು ಸರ್ಕಾರದ ಮಟ್ಟದಲ್ಲಿದೆ. ಈ ಹಂತದಲ್ಲಿ ಅದರ ಬಗ್ಗೆ ಏನಾದರೂ ಹೇಳುವ ಮುಂಚೆ ವರದಿಯಲ್ಲಿ ಏನಿದೆ ಎನ್ನುವುದನ್ನು ಗಮನಿಸಬೇಕಾಗುತ್ತಿದೆ.
ಆದರೆ ವರದಿಯನ್ನು ವೈಜ್ಞಾನಿಕವಾಗಿ ತಯಾರಿಸಿಲ್ಲ ಎಂದು ಚರ್ಚೆಯಾಗುತ್ತಿದೆ. ಪ್ರತಿಯೊಬ್ಬರನ್ನು ಸಂಪರ್ಕಿಸಿ ಅವರನ್ನು ಕೇಳಿ ತಯಾರಿಸಿಲ್ಲ ಅನ್ನುವ ಆರೋಪ ಕೇಳಿ ಬರುತ್ತಿದೆ. ಪ್ರತಿಷ್ಠಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇನ್ನೂ ಸಾಮಾನ್ಯ ವ್ಯಕ್ತಿಗಳನ್ನು ಎಷ್ಟರ ಮಟ್ಟಿಗೆ ಸಂಪರ್ಕಿಸಿರುತ್ತಾರೆ. ಎಲ್ಲ ಸಂಗತಿಗಳನ್ನು ಕ್ರೋಢಿಕರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ
ಸರ್ಕಾರ ನೀಡುವುದು ಬಿಡುವುದು ಅವರವರ ವೈಯಕ್ತಿಕ ವಿವೇಚನೆಗೆ ಬಿಟ್ಟಿದ್ದು, ಆದರೆ ಸಮಾಜದ ಜನರು ಜಾತಿ, ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.