

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ. ಇದು ನನ್ನ ಹಾರೈಕೆಯು ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 75 ವರ್ಷ ಮೀರಿದವರು ರಾಜಕೀಯದಿಂದ ನಿವೃತ್ತರಾಗಬೇಕು ಎಂದು ಆರ್ಎಸ್ಎಸ್ ಮುಖಂಡ ಮೋಹನ ಭಾಗವತ್ ಇತ್ತೀಚೆಗೆ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಲ್ಲಿ 75 ವರ್ಷಗಳನ್ನು ಪೂರ್ಣಗೊಳಿಸಲಿರುವ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದರೆ ಜೆಡಿಯು ಹಾಗೂ ಟಿಡಿಪಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆದರೆ ಅಚ್ಚರಿಯಿಲ್ಲ. ಆಗ, ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೇರಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿದರೆ ಖರ್ಗೆ ಅವರು ಪ್ರಧಾನಿಯಾಗಬಹುದು ಎಂದರು ಅಭಿಪ್ರಾಯಿಸಿದರು.
ಬಿಜೆಪಿಯವರು ಖರ್ಗೆಯವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ದಲಿತರ ಬಗ್ಗೆ ಕಾಳಜಿ ಇದ್ದಲ್ಲಿ ಖರ್ಗೆಯವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿ ಎಂದು ವ್ಯಂಗ್ಯವಾಡುತ್ತಿದ್ದಾರೆ. ಅವರ ಟೀಕೆ ಹಾಗೂ ತಮಾಷೆ ಸೆಪ್ಟೆಂಬರ್ನಲ್ಲಿ ನಿಜವಾಗಬಹುದು. ಗಾಂಧಿ ಮನೆತನ ಅಧಿಕಾರ ತ್ಯಾಗಕ್ಕೆ ಹೆಸರಾಗಿದ್ದು, ರಾಹುಲ್ ಗಾಂಧಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಬಹುದು. 2004ರಲ್ಲಿ ಪ್ರಧಾನಿಯಾಗಲು ಅವಕಾಶವಿದ್ದರೂ ಸೋನಿಯಾ ಗಾಂಧಿ ತ್ಯಾಗ ಮಾಡಿದ್ದರು ಎಂದು ಹೇಳಿದರು.