ಕೆಲವರನ್ನು ನಂಬಿ ಮೋಸ ಹೋದೆ

I trusted some people and got cheated
ಮುದ್ದೇಬಿಹಾಳ ಪಟ್ಟಣದ ಮಾಜಿ ಶಾಸಕ ನಡಹಳ್ಳಿ ಅವರ ಫಾರ್ಮಹೌಸ್‌ನಲ್ಲಿ ನಡೆದ ಆತ್ಮಾವಲೋಕನಾ ಸಭೆಯಲ್ಲಿ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿದರು. ಪಕ್ಷದ ಮುಖಂಡರು ಇದ್ದರು.
Published on

ಮುದ್ದೇಬಿಹಾಳ: ಚುನಾವಣೆಯಲ್ಲಿ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ. ನನ್ನ ಚುನಾವಣೆ ಮುಗಿದಿದೆ. ಆದರೆ ಪಕ್ಷದ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಸೋಲಬಾರದು. ಮುಂಬರುವ ತಾಪಂ, ಜಿಪಂ, ಲೋಕಸಭೆ ಚುನಾವಣೆಯಲ್ಲಿ ಹೋರಾಟಕ್ಕೆ ಸಿದ್ದನಿದ್ದೇನೆ. ನನ್ನನ್ನು ಮತ್ತು ನನ್ನ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಪಕ್ಷದವರಿಗೆ ಬಿಟ್ಟ ವಿಚಾರವಾಗಿದೆ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.

ಇಲ್ಲಿನ ಮಾರುತಿನಗರದ ಹೊರವಲಯದಲ್ಲಿರುವ ತಮ್ಮ ಫಾರ್ಮಹೌಸ್‌ನಲ್ಲಿ ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಉಪಸ್ಥಿತಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆತ್ಮಾವಲೋಕನಾ ಸಭೆಯಲ್ಲಿ ಅವರು ಮಾತನಾಡಿದರು.

ನನ್ನ ಉದ್ಯಮ ಬಲಪಡಿಸಲು ಬೆಂಗಳೂರಿನಲ್ಲಿದ್ದ ನನ್ನ ಬಗ್ಗೆ ವಿರೋಧಿಗಳು ಏನೇನೋ ಮಾತನಾಡಿಕೊಂಡರು. ನನ್ನ ಸೋಲಿಗೆ ಯಾರು ಕಾರಣ ಅನ್ನೋದು ನನಗೆ ಮಾತ್ರವಲ್ಲದೆ ನನ್ನೆಲ್ಲ ಕಾರ್ಯಕರ್ತರಿಗೂ ಗೊತ್ತಿದೆ. ಪಕ್ಷದೊಳಗಿದ್ದುಕೊಂಡೇ ಪಕ್ಷಕ್ಕೆ ದ್ರೋಹ ಬಗೆದವರು ಯಾರು ಅನ್ನೋದೂ ಗೊತ್ತಿದೆ. ವೈರಿಗಳನ್ನು ಎದುರಿಸುವುದು ದೊಡ್ಡದಲ್ಲ ಆದರೆ ಜತೆಗಿದ್ದುಕೊಂಡು ಚೂರಿ ಹಾಕುವವರನ್ನು, ಕುತಂತ್ರಿಗಳನ್ನು ಎದುರಿಸೋದು ಕಷ್ಟ. ಈ ಸೋಲಿನಿಂದ ಯಾವುದೇ ಕಾರ್ಯಕರ್ತರು ತಲೆತಗ್ಗಿಸುವ ಅವಶ್ಯಕತೆಯಿಲ್ಲ ಎಂದರು.

ನಾವು ಜನರಿಗೆ ದ್ರೋಹ ಮಾಡಿಲ್ಲ. ಕಾಂಗ್ರೆಸ್‌ನವರು ಜನರಿಗೆ ಗ್ಯಾರಂಟಿ ಯೋಜನೆ ಮೂಲಕ ಹೇಗೆ ಮೋಸ ಮಾಡಿದ್ದಾರೆ ಎಂಬುದನ್ನು ಜನರಿಗೆ ತಿಳಿಸಿಕೊಡಬೇಕು. ನಾವೀಗ ಪೆಟ್ಟು ತಿಂದ ಹುಲಿಯಂತಾಗಿದ್ದೇವೆ. ವಿನಾಕಾರಣ ನಮ್ಮ ತಂಟೆಗೆ ಬಂದರೆ ಯಾವ ರೀತಿ ಉತ್ತರ ಕೊಡಬೇಕು ಎಂಬುದು ನಮಗೆ ಗೊತ್ತಿದೆ. ಯಾರಾದರೂ ನಮ್ಮ ಬಗ್ಗೆ ಕೊಂಕು ಮಾತಾಡಿದರೆ ನೀವು ತಿರುಗಾಡುತ್ತಿರುವ ರಸ್ತೆ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಾಗಿದ್ದು ಎಂದು ಧೈರ್ಯವಾಗಿ ಹೇಳಿ ಎಂದರು.

ಬಿಜೆಪಿ ವಿಭಾಗೀಯ ಸಂಘಟನಾ ಸಂಚಾಲಕ ಪ್ರಕಾಶ ಅಕ್ಕಲಕೋಟ ಮಾತನಾಡಿ, ಬಿಜೆಪಿಯವರಿಗೆ ಸೋಲು ಹೊಸದಲ್ಲ. ಸೋಲನ್ನು ಸವಾಲಾಗಿ ಸ್ಬೀಕರಿಸಿ ಬರುವ ಚುನಾವಣೆಯಲ್ಲಿ ಇನ್ನೂ ಹೆಚ್ಚಿನ ಶಕ್ತಿಯಿಂದ ಕೆಲಸ ಮಾಡಬೇಕು ಎಂದರು.

ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಮ್ಮ ಹುನಗುಂದ ಬಲದಿನ್ನಿ, ಮುಖಂಡರಾದ ಸಿದ್ದರಾಜ ಹೊಳಿ, ಬಿ.ಪಿ. ಕುಲಕರ್ಣಿ, ಬಸವರಾಜ ಸರೂರ, ಮಂಗಳಾದೇವಿ ಬಿರಾದಾರ ಮಾತನಾಡಿ, ಪಕ್ಷದ್ರೋಹಿಗಳ ವಿರುದ್ಧ ಪಕ್ಷ ಕ್ರಮ ಕೈಕೊಳ್ಳುವುದು ಸೂಕ್ತ ಎಂದರು.

ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರು, ಹಿರಿಯ ಕಾರ್ಯಕರ್ತರು ವೇದಿಕೆಯಲ್ಲಿದ್ದರು. ಪಟ್ಟಣ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ತಮ್ಮ ನೋವು ತೋಡಿಕೊಂಡರು.

ಸೋತಿದ್ದಕ್ಕೆ ನಾನು ಎಂದೂ ಕಣ್ಣೀರು ಹಾಕಿಲ್ಲ. ಆದರೆ ನಮ್ಮ ಮನೆಯ ಸದಸ್ಯನೊಬ್ಬ ಮನೆಯ ಮರ್ಯಾದೆ ಹಾಳುಗೆಡವಿದ್ದಕ್ಕೆ ಕಣ್ಣೀರು ಹಾಕಿದ್ದೇನೆ. ನಾನೂ ಕೆಲವು ತಪ್ಪು ಮಾಡಿದ್ದೇನೆ. ಕೆಲವರನ್ನು ನಂಬಿ ಮೋಸ ಹೋಗಿದ್ದೇನೆ. ಪಕ್ಕದಲ್ಲಿದ್ದವರೇ ಮೋಸ ಮಾಡಿದರು. ಕಾರ್ಯಕರ್ತರ ನೋವು ನನಗೆ ಗೊತ್ತಿದೆ. ಕಾಂಗ್ರೆಸ್‌ನವರ ಸುಳ್ಳುಗಳನ್ನು ಜನ ನಂಬಿದರು. ನಾನು ವಿರೋಧ, ದಬ್ಬಾಳಿಕೆ, ಗುಂಡಾಗಿರಿ ಮಾಡಿಲ್ಲ. ಯಾರೇ ಮನೆಗೆ ಬಂದ್ರೂ ಸಹಾಯ ಮಾಡ್ತಿದ್ದೆ. ಈ ನನ್ನ ಮನೋಭಾವವೇ ತಪ್ಪಾಯ್ತು ಅಂತ ಈಗ ಅನ್ನಿಸ್ತಿದೆ. ಮುಂದಿನ 5ವರ್ಷ ಗಟ್ಟಿ ಕಾರ್ಯಕರ್ತರನ್ನು ಗುರುತಿಸಿ ಬೆಂಬಲಿಸುತ್ತೇನೆ. ಪಕ್ಷದೊಳಗಿದ್ದುಕೊಂಡೇ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳೋರನ್ನ ನಂಬಬೇಡಿ.
ಎ.ಎಸ್. ಪಾಟೀಲ ನಡಹಳ್ಳಿ, ಮಾಜಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net