

ಹುಬ್ಬಳ್ಳಿ: ನಾನು ಓದಿದ್ದು ಬಿವಿಬಿ ಕಾಲೇಜ್‌ನಲ್ಲಿ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಇಲ್ಲಿಯ ಮೂಲೆ ಮೂಲೆಯಲ್ಲಿಯೂ ಓಡಾಡಿದ್ದು ಇಂದಿಗೂ ನೆನಪಲ್ಲಿದೆ. ಸಮಯ ಹೋಗಿದ್ದೇ ಗೊತ್ತಾಗುತ್ತಿಲ್ಲ. ಹುಬ್ಬಳ್ಳಿ ಉತ್ತರ ಕರ್ನಾಟಕದ ಗೇಟ್‌ವೇ ಆಫ್ ಇಂಡಿಯಾ ಇದ್ದಂತೆ. ಬಾಗಲಕೋಟೆಗಿಂತ ಹೆಚ್ಚು ಹುಬ್ಬಳ್ಳಿ ಮೇಲೆ ಪ್ರೀತಿ ಇದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ-ಧಾರವಾಡ ಕೈಗಾರಿಕೋದ್ಯಮಿಗಳ ವೇದಿಕೆ ವತಿಯಿಂದ ಇಲ್ಲಿಯ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಮುರುಗೇಶ ಆರ್. ನಿರಾಣಿ ಅವರ ಷಷ್ಟೃಬ್ದಿ ಪೂರ್ಣ ಸಮಾರಂಭದಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ ಸನ್ಮಾನ ಮಾಡಿಲ್ಲ. ಹುಬ್ಬಳ್ಳಿಯ ಅಭಿಮಾನಿಗಳು ಮಾಡಿರುವ ಸನ್ಮಾನದ ಋಣ ತೀರಿಸಲಾಗದು ಎಂದರು.
ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ‘ಆತ್ಮನಿರ್ಭರ ಭಾರತ’ ಆಗಲೇ ಆರಂಭಿಸಿದ್ದರು. ಸ್ವಾವಲಂಬನೆ ಎಂದರೇನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ನೂರು ವರ್ಷದ ಹಿಂದೆ ಟಾಪ್ ಟೆನ್ ಶ್ರೀಮಂತರಲ್ಲಿ ಮೈಸೂರಿನ ಮಹಾರಾಜರು ಇದ್ದರು. ನಮ್ಮ ರಾಜದಲ್ಲಿರುವ ಅವಕಾಶ, ಸೌಲಭ್ಯ, ಯುವ ಸಮುದಾಯ, ಗುಜರಾತ್, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿ ಇಲ್ಲ. ಆದರೂ ಅದನ್ನು ಸದುಪಯೋಗ ಪಡಿಸಿಕೊಳ್ಳದೆ ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆ. ಉದ್ಯಮಿಗಳು ಕೈಗಾರಿಕಾ ಸೌಲಭ್ಯ ಪಡೆದು ತಮ್ಮ ಪ್ರದೇಶದಲ್ಲಿಯೇ ಉದ್ಯಮ ಆರಂಭಿಸಬೇಕು ಎಂದರು.
ಉದ್ಯಮಿಯಾಗು-ಉದ್ಯೋಗ ನೀಡು ಎಂಬ ತತ್ವ ಅಳವಡಿಸಿಕೊಂಡು ಮುಂದೆ ಸಾಗಬೇಕು. ಉತ್ತರ ಕರ್ನಾಟಕದಲ್ಲಿ ಕೈಗಾರಿಕೋದ್ಯಮ ಆರಂಭಕ್ಕೆ ಬಹಳಷ್ಟು ಅವಕಾಶವಿವೆ. ಉದ್ಯಮಿಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕೈಗಾರಿಕೋದ್ಯಮಿ, ರಾಜಕಾರಣಿಯಾಗಲು, ಟ್ರೇಡರ್ ಆಗಲು ಗಾಡ್‌ಫಾದರ್ ಬೇಕಾಗಿಲ್ಲ. ಯೋಜನೆಗಳು ಬದಲಾಗಬೇಕು. ಈ ನಿಟ್ಟಿನಲ್ಲಿ ಮುಂದೆ ಸಾಗಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹುಬ್ಬಳ್ಳಿ ಎಫ್‌ಎಂಸಿಜಿ ಕ್ಲಸ್ಟರ್ ಖರೀದಿ ಮಾಡಿದವರು ನಿರಾಣಿಯವರು. ಸರ್ಕಾರಗಳು ಬದಲಾದರೂ ನೀತಿ-ನಿಯಮಗಳು ಬದಲಾಗಬಾರದು. ಹೀಗಾದಲ್ಲಿ ಮಾತ್ರ ಹೆಚ್ಚು ಕೈಗಾರಿಕೆಗಳು ಹುಬ್ಬಳ್ಳಿಗೆ ಬರಲು ಸಾಧ್ಯ. ಸರ್ಕಾರ ಬದಲಾದಾಗ ಇಲ್ಲಿಯ ಭೂಮಿ ದರ ಹೆಚ್ಚಾಯಿತು. ಇದರಿಂದ ಕೈಗಾರಿಕೆಗೆ ಹಿನ್ನಡೆಯಾಯಿತು. ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.
ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಪ್ರೊ.ಅಶೋಕ ಶೆಟ್ಟರ್ ಮಾತನಾಡಿ, ನಿರಾಣಿ ಅವರು ಕೆಎಲ್‌ಇ ಹೆಮ್ಮೆಯ ವಿದ್ಯಾರ್ಥಿ. ಸಾಧನೆಗೆ ಅಂಕ ಮುಖ್ಯ ಅಲ್ಲ, ಕೌಶಲಗಳು ಮುಖ್ಯ. ಮುರುಗೇಶ ನಿರಾಣಿ ಅವರು ಉದ್ಯಮಿಯಾಗಿ, ಸಚಿವರಾಗಿ, ಸಮಾಜ ಸೇವಕರಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ಎಂಆರ್‌ಎನ್ ಮುಖ್ಯಸ್ಥ ಮುರುಗೇಶ ನಿರಾಣಿ ಅವರು ಉತ್ತರ ಕರ್ನಾಟಕದ ಯಶಸ್ವಿ ರೋಲ್ ಮಾಡೆಲ್‌ಗಳಾಗಿದ್ದಾರೆ ಎಂದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮಾನವೀಯತೆ ತಳಹದಿ ಮೇಲೆ ನಿರಾಣಿ ಅವರು ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಕೈಗಾರಿಕೋದ್ಯಮಿಯಾಗಿ, ರಾಜಕಾರಣಿಯಾಗಿ, ಧರ್ಮದ ತಳಹದಿ ಮೇಲೆ ನಡೆಯುತ್ತಿದ್ದಾರೆ. ಒಂದು ಲಕ್ಷ ಕುಟುಂಬಕ್ಕೆ ಅನ್ನದಾತರಾಗಿದ್ದಾರೆ. ಅವರಿಂದ ಇನ್ನಷ್ಟು ಸಮಾಜ ಸೇವೆ ಮುಂದುವರಿಯಲಿ ಎಂದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿದರು.
ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಎಲ್‌ಇ ತಾಂತ್ರಿಕ ವಿವಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಆರ್. ಪಾಟೀಲ ಅವರು ಬರೆದ ‘ಅಪ್ರತಿಮ ಸಾಧನೆಗೈದ ಗ್ರಾಮೀಣ ಸಾಧಕ ಶ್ರೀ ಮುರುಗೇಶ ನಿರಾಣಿ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಬೆಂಗಳೂರು ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಬಿರಾದಾರ, ಕೆಸಿಸಿಐ ಅಧ್ಯಕ್ಷ ಜೆ.ಕೆ. ಆದಪ್ಪಗೌಡರು, ಎನ್‌ಕೆಎಸ್‌ಎಸ್‌ಐಎ ಅಧ್ಯಕ್ಷ ರಮೇಶ ಪಾಟೀಲ, ಕೆಎಂಟಿಆರ್‌ಸಿ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ ಅವರನ್ನು ಸನ್ಮಾನಿಸಲಾಯಿತು.
ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ ಇತರರು ಇದ್ದರು.