

ಯಳಂದೂರು: ಜಿಲ್ಲೆಯ ಕುದೇರು ಗ್ರಾಮದಲ್ಲಿರುವ ಚಾಮುಲ್‌ನಲ್ಲಿ ನಂದಿನಿ ಐಸ್ ಕ್ರೀಂ ಘಟಕ ಸ್ಥಾಪಿಸುವ ಉದ್ದೇಶದಿಂದ ಇಲ್ಲಿನ ಆಡಳಿತ ಮಂಡಳಿಯವರು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ರೈತ ಸಂಘದ ವತಿಯಿಂದ ಚಾಮರಾಜನಗರದ ಜಿಲ್ಲಾಡಳಿತ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ನಾನು ಮುಖ್ಯಮಂತ್ರಿ ಅವರನ್ನು ನಿಂದಿಸಿದ್ದೇನೆ ಎಂದು ಕಾಂಗ್ರೆಸ್ ಕಾರ್ಯಕರ್ತರು ನೀಡಲು ಹೊರಟಿರುವ ದೂರನ್ನು ದಾಖಲಿಸಿಕೊಳ್ಳಬಾರದು. ಇದು ಸತ್ಯಕ್ಕೆ ದೂರವಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಹೇಳಿದರು.
ಸೋಮವಾರ ಈ ಸಂಬಂಧ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ರೈತರೊಂದಿಗೆ ಆಗಮಿಸಿ ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಚಾಮುಲ್‌ಗೆ 53 ಕೋಟಿ ರೂ. ಸಾಲವಿದೆ. ಇದನ್ನು ಸರ್ಕಾರದಿಂದ ಪಡೆದುಕೊಂಡು ಮೊದಲು ಇದನ್ನು ತೀರಿಸಿ. ಬದಲಾಗಿ ಮತ್ತೆ ಸಾಲ ಮಾಡಿ ಐಸ್ ಕ್ರೀಂ ಘಟಕ ಸ್ಥಾಪಿಸಿದರೆ ನಷ್ಟಕ್ಕೆ ಹೋಗುತ್ತದೆ. ಇದರಿಂದ ಹೈನುಗಾರರಿಗೆ ತೊಂದರೆಯಾಗುತ್ತದೆ ಎಂದು ನಾವು ಮೊದಲಿಂದಲೂ ಇದನ್ನು ವಿರೋಧಿಸುತ್ತಿದ್ದೇವೆ. ಪ್ರತಿಭಟನೆಯಲ್ಲಿ ನಾವು ವ್ಯಕ್ತಿಗತವಾಗಿ ಯಾರನ್ನೂ ಬೈದಿಲ್ಲ. ಮುಖ್ಯಮಂತ್ರಿಯವರಿಗೆ ಬಾಲ ಕಟ್ ಮಾಡುತ್ತೇವೆ ಎಂದು ಹೇಳಿದ್ದೇನೆ. ಬಾಯ್ತಪ್ಪಿನಿಂದ ಕಾಲು ಕಟ್ ಮಾಡುತ್ತೇನೆ ಎಂದು ಹೇಳಿದ್ದು ಇದನ್ನೇ ಕೆಲ ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿ ಪತ್ರಿಕಾಗೋಷ್ಠಿಗಳನ್ನು ಮಾಡಿದ್ದಾರೆ ಎಂದು ದೂರಿದರು.
ನಾನು ವ್ಯಕ್ತಿಗತವಾಗಿ ಯಾರನ್ನೂ ನಿಂದಿಸಿಲ್ಲ. ಇಲ್ಲಿನ ಎಂಡಿ, ನಿರ್ದೇಶಕ ಮಂಡಳಿ ಸದಸ್ಯರು, ಮುಖ್ಯಮಂತ್ರಿ ಕುರಿತಾಗಿ ಮಾತನಾಡಿದ್ದೇನೆ. ಇದನ್ನೇ ನೆಪವಾಗಿಟ್ಟುಕೊಂಡು ನಮ್ಮ ಮೇಲೆ ದೂರು ನೀಡುತ್ತೇವೆ, ಎಫ್‌ಐಆರ್ ದಾಖಲಿಸಿ ಎನ್ನುವುದು ರಾಜಕೀಯ ಪ್ರೇರಿತವಾಗಿದೆ ಎಂದರು.
ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀವು ಬುದ್ಧಿವಾದ ಹೇಳಬೇಕು, ಇಲ್ಲವಾದಲ್ಲಿ ರೈತರೇ ನಿಮಗೆ ಬುದ್ಧಿ ಹೇಳಬೇಕಾಗುತ್ತದೆ. ನಮ್ಮ ಸಂಘಟನೆಯ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಕೂಡಲೇ ನಿಲ್ಲಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಬಸವರಾಜು ಮೂಲಕ ಮನವಿಪತ್ರ ಸಲ್ಲಿಸಿದರು.
ಚಾಮಲಾಪುರ ಸಿದ್ದಲಿಂಗಸ್ವಾಮಿ, ವಿ.ರವಿ, ರಾಜೇಶ್, ಮಲ್ಲಪ್ಪ, ಪುಟ್ಟಮಾದೇಗೌಡ, ಎಂ.ಪ್ರಸನ್ನ, ಶಿವಪ್ರಸಾದ್, ಮಹೇಶ್, ವೃಷಬೇಂದ್ರ, ಪುಟ್ಟಸ್ವಾಮಿ, ಮಂಜುನಾಥ, ಜಿ. ಕೇಶವಮೂರ್ತಿ, ಮಹೇಶ್ ಇತರರು ಇದ್ದರು.