

ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಜಾಮೀನು ಮಂಜೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಟ ಪ್ರಕಾಶ್ ರಾಜ್ ನಿರಾಕರಿಸಿದರು.
ನಗರದ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಡಿ.14, 15 ರಂದು ‘ನಿರ್ದಿಗಂತ’ ಸಂಸ್ಥೆಯಿಂದ ‘ಶಾಲಾ ರಂಗ’ ಮಕ್ಕಳ ಹಬ್ಬ ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಲು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಆಯೋಜಿ ಸಿದ್ದರು.
ಮಕ್ಕಳ ಹಬ್ಬದ ಕುರಿತು ಮಾತನಾಡಿದ ನಂತರ ದರ್ಶನ್ ಹಾಗೂ ರಾಜಕೀಯ ವಿಚಾರದ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ಆ ಸಂದರ್ಭ ಮಾತನಾಡಿದ ಪ್ರಕಾಶ್ ರಾಜ್, ನಾನು ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ ನನ್ ಮಕ್ಕಳ ಬಗ್ಗೆ ಮಾತನಾಡಲು ಬಂದಿಲ್ಲ. ರಾಜಕೀಯ ಹಾಗೂ ಇತರೆ ಪ್ರಶ್ನೆ ಕೇಳಬೇಡಿ. ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಮಾತನಾಡುತ್ತೇನೆ. ಈಗ ಕೇವಲ ಶಾಲಾ ರಂಗದ ಕುರಿತು ಮಾತ್ರ ಮಾತನಾಡುತ್ತೇನೆ ಎಂದರು. ಪ್ರಕಾಶ್‌ರಾಜ್ ಅವರು ‘ಕಳ್ ನನ್ ಮಕ್ಕಳು’ ಅಂದಿದ್ದು ಯಾರಿಗೆ ಎಂಬ ಪ್ರಶ್ನೆ ಇದೀಗ ಎಲ್ಲರನ್ನು ಕಾಡುತ್ತಿದೆ.