ಹಾಲಿಗೆ ಪ್ರೋತ್ಸಾಹಧನ ಕೊಟ್ಟಿದ್ದು ನಾನು, ಬಿಎಸ್‌ವೈ ಅಲ್ಲ: ಸಿದ್ದರಾಮಯ್ಯ

mysore siddaramiah
Published on


ಮೈಸೂರು:
ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿನ ನೂತನ ಶೀತಲೀಕರಣ ಘಟಕವನ್ನು ಉದ್ಘಾಟಿಸಿದರು.
ನಮ್ಮೂರು ಆದ ಕಾರಣ ಹೆಚ್ಚು ಭಾಷಣ ಮಾಡುವುದಿಲ್ಲ. ಚಿಕ್ಕವಯಸ್ಸಿನಿಂದ ಎಲ್ಲರೂ ನೋಡಿದ್ದೀರಾ. ಶಾಸಕನಾಗಿ ತಾಲೂಕು ಬೋರ್ಡ್ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮನಹುಂಡಿ ಗ್ರಾಮದಲ್ಲಿ ಹಾಲು ಉತ್ಪಾದಕ ನೂತನ ಘಟಕ ಆರಂಭವಾಗಿದೆ. ಎಲ್ಲರೂ ಸೇರಿ ಉದ್ಘಾಟನೆ ಮಾಡಿದ್ದೀವೆ. ಅತ್ಯಂತ ಸಂತೋಷದಿಂದ ಈ ಕಟ್ಟಡ ಉದ್ಘಾಟನೆ ಮಾಡಿದ್ದೇನೆ ಎಂದು ಅವರು ಹೇಳಿದರು.

ಪ್ರೋತ್ಸಾಹಧನ ನೀಡಿದ್ದು ನಾನು!
ನಾನು ಪಶು ಸಂಗೋಪನೆ ಸಚಿವನಾಗಿದ್ದೆ. ಎರಡೂವರೆ ವರ್ಷಗಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೆ. ಮೊದಲು ಡೇರಿ ಮತ್ತು ಯೂನಿಯನ್‌ಗಳು ಬೇರೆ ಇತ್ತು. ಡೇರಿಗೆ ಹಾಲು ಹಾಕುವ ರೈತರಿಗೆ ಐದು ರೂ. ಪ್ರೋತ್ಸಾಹ ಧನ ಮಾಡಿದ್ದು ನಾನು ಎಂದು ಸಿದ್ದರಾಮಯ್ಯ ತಿಳಿಸಿದರು.
ಆ ವೇಳೆ ಡೇರಿ ನಿರ್ದೇಶಕರೊಬ್ಬರು ‘ನೀವಲ್ಲ ನೀಡಿದ್ದು, ಬಿ.ಎಸ್.ಯಡಿಯೂರಪ್ಪ’ ಎಂದರು. ಯಡಿಯೂರಪ್ಪ ಅಲ್ಲ ನಾನು ಐದು ರೂ. ಪ್ರೋತ್ಸಾಹ ಧನ ಕೊಟ್ಟಿದ್ದು ಕೂತ್ಕೊ ಎಂದ ಸಿದ್ದರಾಮಯ್ಯ, ಯಡಿಯೂರಪ್ಪ ಅಲ್ಲ ಪ್ರೋತ್ಸಾಹ ಧನ ಕೊಟ್ಟಿದ್ದು ನಾನು ಎಂದು ಮತ್ತೆ ಒತ್ತಿ ಹೇಳಿದರು. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಇತರರಿದ್ದರು.

ಭರ್ಜರಿ ಸ್ವಾಗತ:
ಹುಟ್ಟೂರು ಸಿದ್ದರಾಮನಹುಂಡಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದರು. ಸೇಬಿನ ಹಾರ ಹಾಕಿ ಗ್ರಾಮದ ಮುಂಭಾಗದಿಂದ ಮೆರವಣಿಗೆ ಮೂಲಕ ಕರೆತಂದರು. ಈ ವೇಳೆ ಸಿದ್ದರಾಮಯ್ಯ ಪರ ನಾನಾ ಘೋಷಣೆ ಕೂಗಿದರು. ಬಳಿಕ ಸಿದ್ಧರಾಮೇಶ್ವರ ದೇವರ ದರ್ಶನ ಪಡೆದರು.
ಕಾರ್ಯಕ್ರಮದ ಬಳಿಕ ತಮ್ಮ ಹುಟ್ಟಿದ ಮನೆಯಲ್ಲಿ ಸಸ್ಯಾಹಾರ ಭೋಜನ ಸೇವಿಸಿದರು. ಮುದ್ದೆ, ಹಸಿ ಅವರೆಕಾಳಿನ ಸಾಂಬಾರ್, ಸೊಪ್ಪಿನ ಪಲ್ಯ, ಮಸಾಲೆ ವಡೆ, ರಸಂ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net