‘ಐ ಲವ್’ ಆರ್‌ಎಸ್‌ಎಸ್ ಅಭಿಯಾನ: ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ

I Love RSS Campaign Mandya
Published on

ಮಂಡ್ಯ: ಆರ್‌ಎಸ್‌ಎಸ್ ಚಟುವಟಿಕೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಗರದಲ್ಲಿ ಹಿಂದು ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಐ ಲವ್ ಆರ್‌ಎಸ್‌ಎಸ್ ಪೋಸ್ಟರ್ ಅಭಿಯಾನದ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಪ್ರಧಾನ ಅಂಚೆ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೋಸ್ಟರ್‌ಗಳನ್ನು ಅಂಗಡಿ ಮುಂಗಟ್ಟುಗಳ ಮುಂದೆ, ವಾಹನಗಳಿಗೆ ಅಂಟಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಗತ್ತಿನ ದೊಡ್ಡ ದೇಶಭಕ್ತ ಸಂಘಟನೆ, ಸುಮಾರು ಎಂಬತ್ತು ಸಾವಿರ ಶಾಖೆಗಳು ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿರುವ ಸಂಘಟನೆ ಎಂದರೆ ಅದು ಆರ್‌ಎಸ್‌ಎಸ್. ಇಂದು ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆ ಇಲ್ಲದೆ ಹೋಗಿದ್ದರೆ ನೆರೆಯ ಶ್ರೀಲಂಕಾ, ಬಾಂಗ್ಲಾ ಹಾಗೂ ನೇಪಾಳ ದೇಶಗಳಲ್ಲಿ ಆದಂತಹ ಆಂತರಿಕ ಗಲಭೆ ನಡೆಯುತ್ತಿದ್ದವು. ಭಾರತವನ್ನು ಮತ್ತೊಮ್ಮೆ ವಿಭಜನೆ ಮಾಡಲು ಬಾಹ್ಯ ಶಕ್ತಿಗಳು ಜಾಗತಿಕ ಮಟ್ಟದಲ್ಲಿ ಪಿತೂರಿ ನೆಡೆಯುತ್ತಿದೆ. ಬಾಂಗ್ಲಾ ದೇಶದ ಯುನಿವರ್ಸಿಟಿಗಳಲ್ಲಿ ಈ ಬಗ್ಗೆ ಹತ್ತಾರು ವರ್ಷದಿಂದ ಸಂಶೋಧನೆ ನಡೆಯುತ್ತಿದೆ. 2050ರ ವೇಳೆಗೆ ಮತ್ತೊಮ್ಮೆ ಭಾರತವನ್ನು ಧರ್ಮದ ಹೆಸರಿನಲ್ಲಿ ಭಾಗ ಮಾಡುವ ಪಿತೂರಿ ನಡೆಯುತ್ತಿದೆ. ಅದಕ್ಕೆ ಇಂದು ತಡೆಗೋಡೆಯಾಗಿ ನಿಂತಿರುವುದು ಆರ್‌ಎಸ್‌ಎಸ್. ದೇಶದಲ್ಲಿ ಭೂಕಂಪ, ಸುನಾಮಿ, ಪ್ರವಾಹದಂತಹ ಸಂದರ್ಭದಲ್ಲಿ ಎಲ್ಲರಿಗಿಂತ ಮೊದಲು ನೆರವಿಗೆ ನಿಲ್ಲುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇಂತಹ ಸಂಘಟನೆ ಬಗ್ಗೆ ಲಘುವಾಗಿ ಮಾತನಾಡಿರುವ ಪ್ರಿಯಾಂಕ್ ಖರ್ಗೆ ಈ ದೇಶದ ಜನರ ಬಗ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ನೆಹರು, ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧ ಮಾಡುವ ವ್ಯರ್ಥ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ನಿಷೇಧದ ಬಗ್ಗೆ ಘನ ನ್ಯಾಯಾಲಯ ಕೂಡ ಕಾಂಗ್ರೆಸ್ ಪಕ್ಷಕ್ಕೆ ಕಪಾಲ ಮೋಕ್ಷ ಮಾಡಿದೆ. ಇದನ್ನು ಮರೆತ ಪ್ರಿಯಾಂಕ್ ಖರ್ಗೆ ತಮ್ಮ ನಾಲಿಗೆಯನ್ನು ಹರಿ ಬಿಟ್ಟಿರುವುದು ನಗೆ ಪಾಟಲಿನ ವಿಚಾರವಾಗಿದೆ. ರಾಜ್ಯದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿವೆ. ಮಳೆ ಹಾನಿಯಿಂದ ರೈತರು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ವೃದ್ದಾಪ್ಯ, ವಿಧವಾ ವೇತನ ಸೇರಿದಂತೆ ಹಲವಾರು ಸೌಲಭ್ಯಗಳ ಮರೀಚಿಕೆಯಾಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ. ಕಾನೂನು ಸುವ್ಯವಸ್ಥೆ ಕುಸಿದಿದೆ. ಕಲುಬುರಗಿ ಜಿಲ್ಲೆಯಲ್ಲೇ ಕನಿಷ್ಟ ಮೂಲ ಸೌಲಭ್ಯಗಳಿಲ್ಲ. ಬಸ್ ನಿಲ್ದಾಣವಿಲ್ಲದೆ ಜನರು ಬಸ್ ಬಂದಾಗಲೆಲ್ಲ ಅದರ ಹಿಂದೆ ಓಡಿಹೋಗಿ ಬಸ್ಸನ್ನೇರುವಂತಹ ವಾತಾವರಣ ಇದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವುದರ ಬಗ್ಗೆ ಪ್ರಿಯಾಂಕ್ ಖರ್ಗೆ ಮೊದಲು ಆಧ್ಯತೆ ನೀಡಲಿ. ನಂತರ ಆರ್.ಎಸ್.ಎಸ್. ನಿಷೇಧದ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ವಿವೇಕ್, ನಾಗಣ್ಣ ಮಲ್ಲಪ್ಪ, ಶಿವಕುಮಾರ್ ಆರಾಧ್ಯ, ಶಿವಲಿಂಗಯ್ಯ, ಗೊರವಲೆ ಶಿವಣ್ಣ, ಆನಂದ, ನಂದೀಶ, ಚನ್ನೇಗೌಡ, ಚಿಕ್ಕೇಗೌಡ ಸುರೇಶ, ಮಹದೇವಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net