

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಅಳವಡಿಸಿದ್ದ ‘ಐ ಲವ್ ಮೈಸೂರು’ ಇಂಗ್ಲಿಷ್ ಫಲಕಕ್ಕೆ ಕನ್ನಡ ಪ್ರೇಮಿಗಳು ಮಸಿ ಬಳಿದು, ಕನ್ನಡ ಬಳಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಫಲಕವನ್ನು ತೆರವುಗೊಳಿಸಲಾಯಿತು.
ಮೂರು ದಿನಗಳ ಹಿಂದಷ್ಟೇ ದೇವಾಲಯದ ಆವರಣದಲ್ಲಿ ‘ಐ ಲವ್ ಮೈಸೂರು’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದ ಫಲಕವನ್ನು ಅಳವಡಿಸಲಾಗಿತ್ತು. ನಿತ್ಯ ಬೆಳಗ್ಗೆ ವಾಯುವಿಹಾರಕ್ಕೆ ಬರುವವರು, ಪಕ್ಷಿ-ಪಾರಿವಾಳಗಳಿಗೆ ಕಾಳು ಹಾಕಲು ಬರುವವರು ಹಾಗೂ ವಿವಾಹ ಪೂರ್ವ ಫೋಟೋ ಶೂಟ್‌ಗಾಗಿ ಬರುವವರು ಸೇರಿದಂತೆ ಪ್ರವಾಸಿಗರು ಈ ಫಲಕದ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದರು.
ಕಳೆದ ರಾತ್ರಿ ಕನ್ನಡ ಹೋರಾಟಗಾರರು ಫಲಕಕ್ಕೆ ‘ಕನ್ನಡ ಬಳಸಿ’ ಎಂದು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮಣಿದಿರುವ ಪಾಲಿಕೆ ‘ಅಭಯ’ ತಂಡದ ಸಿಬ್ಬಂದಿ ಫಲಕವನ್ನು ಸ್ಥಳಾಂತರಿಸಿದ್ದಾರೆ.
ಮಸಿ ಬಳಿದಿದ್ದ ಫಲಕ ಅಭಾಸವಾಗಿ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಮುಜುಗರವಾಗಿ ತಪ್ಪು ಸಂದೇಶ ರವಾನೆಯಾಗಬಾರದೆಂಬ ಉದ್ದೇಶದಿಂದ ಈ ಫಲಕವನ್ನು ಪುರಭವನ ಆವರಣಕ್ಕೆ ಕೊಂಡೊಯ್ದು ಬಚ್ಚಿಡಲಾಯಿತು.
ನೋ ಪಾರ್ಕಿಂಗ್ ಬರಹಕ್ಕೂ ಮಸಿ: ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಪ್ರವಾಸಿಗರು ವಾಹನ ನಿಲುಗಡೆ ಮಾಡುವುದಕ್ಕೆ ಕಡಿವಾಣ ಹಾಕಲು ಬಿಳಿ ಬಣ್ಣದಲ್ಲಿ ಇಂಗ್ಲಿಷ್ ಬರಹದಲ್ಲಿ ‘ನೋ ಪಾರ್ಕಿಂಗ್’ ಎಂದು ದಪ್ಪ ಅಕ್ಷರದಲ್ಲಿ ಬರೆಯಲಾಗಿತ್ತು. ಆದರೆ, ಆ ಅಕ್ಷರದ ಮೇಲೂ ‘ಕನ್ನಡ ಬಳಸಿ’ ಎಂದು ಮಸಿ ಬಳಿಯಲಾಗಿದೆ.